ರಾವಲ್ಕೋಟ್(ಪಿಒಕೆ): ಯುದ್ಧ, ರಕ್ತಪಾತವಿಲ್ಲದೆ ಪಾಕ್ ಆಕ್ರಮಿತ ಕಾಶ್ಮೀರ ಶೀಘ್ರ ಭಾರತಕ್ಕೆ ಮರುಸೇರ್ಪಡೆಯಾಗಲಿದೆ ಎಂಬ ಬಿಜೆಪಿ ನಾಯಕರ ಆತ್ಮವಿಶ್ವಾಸದ ಮಾತುಗಳ ನಡುವೆಯೇ ಪಿಒಕೆಯಲ್ಲಿ ಭಾರತದ ತಿರಂಗ ಹಾರಾಡಿದೆ. ಹಣದುಬ್ಬರದ, ಅಗತ್ಯ ವಸ್ತುಗಳ ಬೆಲೆ ಏರಿಕೆ, ವಿದ್ಯುತ್ ಕಡಿತ ಸೇರಿದಂತೆ ಹತ್ತಾರು ಸಮಸ್ಯೆಗಳ ವಿರುದ್ಧ ತಿರುಗಿಬಿದ್ದಿರುವ ಸ್ಥಳೀಯರು, ಪಾಕಿಸ್ತಾನ ಸೇನೆ ಹಾಗೂ ಪೊಲೀಸರ ವಿರುದ್ಧ ಬೃಹತ್ ಹೋರಾಟ ನಡೆಸಿದ್ದಾರೆ. ಶುಕ್ರವಾರ ಮೀರ್ಪುರ್ ಜಿಲ್ಲೆಯ ಸ್ಕಿರ್ವಿುಶ್ನಲ್ಲಿ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ಭುಗಿಲೆದ್ದ ಪರಿಣಾಮ ನೂರಾರು ಜನರು ಗಾಯಗೊಂಡಿದ್ದಾರೆ.
ಭಾರತಕ್ಕೆ ಜೈಕಾರ: ಪಿಒಕೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಪರವಾಗಿ ಜೈಕಾರ ಮೊಳಗಿದೆ. ಪ್ರತಿಭಟನೆ ವೇಳೆ ಜನರು ಭಾರತದ ತಿರಂಗಾ ಹಿಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಅನ್ನಕ್ಕೂ ಬರ: ಪಾಕಿಸ್ತಾನದಲ್ಲಿ ಹಣದುಬ್ಬರ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ದರ ಗಗನಮುಖಿಯಾಗಿದೆ. ಗ್ಯಾಸ್ ಸಿಲಿಂಡರ್ ದರ 12,500 ರೂ. ತಲುಪಿದ್ದರೆ, 1 ಕೆಜಿ ಗೋಧಿ ಹಿಟ್ಟು 800 ರೂ. ದಾಟಿದೆ. ಲೀಟರ್ ಹಾಲಿನ ದರ ಕೂಡ 210 ರೂ. ತಲುಪಿದೆ. ಒಂದು ರೊಟ್ಟಿ ತಿನ್ನುವುದಕ್ಕೂ ಸಾಧ್ಯವಾಗದ ಸ್ಥಿತಿಗೆ ಜನಸಾಮಾನ್ಯರು ತಲುಪಿದ್ದಾರೆ. ಇನ್ನು ವಿದ್ಯುತ್ ಕಡಿತ ಕೂಡ ಜನ ಜೀವನವನ್ನು ದುಸ್ತರಗೊಳಿಸಿದೆ. ಈ ದುರವಸ್ಥೆಗೆ ಪಾಕಿಸ್ತಾನದ ಸೇನೆ, ಸರ್ಕಾರವೇ ಕಾರಣ ಎಂದು ದೂರುತ್ತಿರುವ ಜನರು ಭಾರತಕ್ಕೆ ಸೇರ್ಪಡೆ ಮಾಡುವಂತೆ ರಸ್ತೆ ರಸ್ತೆಗಳಲ್ಲಿ ಘೋಷಣೆ ಕೂಗುತ್ತಿದ್ದಾರೆ.
ಇಬ್ಬರ ಸಾವು: ಪಿಒಕೆಯ ಮೂಲೆಮೂಲೆಯಲ್ಲಿ ಪಾಕಿಸ್ತಾನಿ ವಿರೋಧಿ ಹೋರಾಟ ತಾರಕಕ್ಕೇರುತ್ತಿದೆ. ಇದರಿಂದ ಅಂತಾರಾಷ್ಟ್ರೀಯ ಮುಜುಗರಕ್ಕೀಡಾಗುತ್ತಿರುವ ಪಾಕಿಸ್ತಾನ ಪ್ರತಿಭಟನಾಕಾರರನ್ನು ಬಂಧಿಸಿ ಜೈಲಿಗಟ್ಟುತ್ತಿದೆ. ಬೀದಿಗಿಳಿದ ಜನರನ್ನು ಹಿಂದಿರುಗಿಸಲು ಪೊಲೀಸರು ಎಕೆ 47 ಬಳಸಿ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನಾ ಮೆರವಣಿಗೆ ಮೇಲೆ ಪೊಲೀಸರು ಗುಂಡು ಹಾರಿಸಿದ್ದರಿಂದ ಇಬ್ಬರು ಪ್ರತಿಭಟನಾಕಾರರು ಮೃತರಾಗಿದ್ದಾರೆ ಎಂದು ವರದಿಯಾಗಿದೆ.
ಚೀನಾಗೆ ಹಸ್ತಾಂತರ: ಪಾಕ್ ಆಕ್ರಮಿತ ಕಾಶ್ಮೀರದ ಹುಂಜಾ- ಗಿಲ್ಗಿಟ್, ಶಕ್ಸಗಾಮ್ ರಕ್ಸಾಮ್ ಬಾಲ್ಟಿಸ್ತಾನ ಪ್ರದೇಶವನ್ನು ಪಾಕಿಸ್ತಾನ 1963ರಲ್ಲಿ ಚೀನಾಗೆ ಹಸ್ತಾಂತರಿಸಿತು. ಪಿಒಕೆ ಜಿಲ್ಲೆಗಳಿಗಿಂತ ಗಿಲ್ಗಿಟ್ ಬಾಲ್ಟಿಸ್ತಾನದಲ್ಲಿ ಭಾರತ ಪರ ನಿಲುವು ದಿನೇ ದಿನೆ ಹೆಚ್ಚಾಗುತ್ತಿದೆ.
ಕಾಂಗ್ರೆಸ್ ಮತ್ತು ಪಿಒಕೆ: ಕಾಂಗ್ರೆಸ್ ಮತ್ತು ಅದರ ಆಪ್ತ ಪಕ್ಷಗಳು ಪಿಒಕೆ ವಿಚಾರದಲ್ಲಿ ಪಾಕಿಸ್ತಾನದ ಪರ ನಿಲುವು ಹೊಂದಿವೆ. ಇಂಡಿ ಮೈತ್ರಿಕೂಟದ ನಾಯಕ ಫಾರುಕ್ ಅಬ್ದುಲ್ಲಾ ಭಾರತ ಪಿಒಕೆ ವಿಚಾರಕ್ಕೆ ಹೋದರೆ ಪಾಕಿಸ್ತಾನ ಕೈಗೇನು ಬಳೆ ತೊಟ್ಟಿಲ್ಲ ಎಂದಿದ್ದರು. ಇದನ್ನು ಬೆಂಬಲಿಸಿದ್ದ ಕೈ ನಾಯಕ ಮಣಿಶಂಕರ್ ಅಯ್ಯರ್ ಕೂಡ ಪಾಕಿಸ್ತಾನವನ್ನು ಭಾರತ ಗೌರವಿಸದಿದ್ರೆ ಅಣುಬಾಂಬ್ ಬೀಳಬಹುದೆಂದು ಎಚ್ಚರಿಸಿದ್ದರು.
ಏನಿದು ಪಿಒಕೆ? : 1947ರಲ್ಲಿ ಪಾಕಿಸ್ತಾನ ಆಕ್ರಮಿಸಿದ ಜಮ್ಮು ಕಾಶ್ಮೀರದ ಭಾಗವೇ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ). ಪಾಕಿಸ್ತಾನ ಪಿಒಕೆಯನ್ನು ಆಜಾದ್ ಕಾಶ್ಮೀರ ಮತ್ತು ಗಿಲ್ಗಿಟ್ ಪಾಕಿಸ್ತಾನ ಎಂದು 2 ಭಾಗಗಳಾಗಿ ವಿಂಗಡಿಸಿದೆ. ಮೀರ್ಪರ್, ಬಿಂಬರ್, ಕೋಟ್ಲಿ, ಮುಜಫರಾ ಬಾದ್, ಬಾಗ್, ನೀಲಂ, ರಾವಲಕೋಟ್, ಸುಧಾನೋತಿ ಆಜಾದ್ ಕಾಶ್ಮೀರದ ಜಿಲ್ಲೆಗಳು.
ಬಿಜೆಪಿಯ ಪ್ರಮುಖ ಅಜೆಂಡಾ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಷಾ, ಜೈಶಂಕರ್ ಕೆಲ ದಿನಗಳಿಂದ ಪಿಒಕೆ ತಾನಾಗಿಯೇ ಭಾರತಕ್ಕೆ ಸೇರ್ಪಡೆ ಆಗಲಿದೆ ಎಂದು ಹೇಳಿಕೊಂಡೇ ಬರುತ್ತಿದ್ದಾರೆ. ಪಾಕಿಸ್ತಾನದ ಆಡಳಿತಕ್ಕೆ ಬೇಸತ್ತು ಅಲ್ಲಿನ ಜನರೇ ಭಾರತದತ್ತ ಒಲವು ತೋರಿದ್ದಾರೆ. ಭಾರತ ಯುದ್ಧವನ್ನೇ ಮಾಡದೆ ಪಿಒಕೆ ಕೈವಶ ಮಾಡಿಕೊಳ್ಳುವ ದಿನ ದೂರದಲ್ಲಿಲ್ಲ ಎಂದು ಬಿಜೆಪಿ ನಾಯಕರು ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಕೆಲವೇ ವರ್ಷಗಳಲ್ಲಿ ಪಿಒಕೆ ಭಾರತದ ಮುಡಿ ಸೇರಿದರೂ ಅಚ್ಚರಿಯಿಲ್ಲ ಎಂಬ ವಿಶ್ಲೇಷಣೆ ನಡೆದಿದೆ.
. ಪಾಕ್ನಲ್ಲಿ ರಾಜಕೀಯ ಅನಿಶ್ಚಿತತೆ ಗ್ರಹಣ
. ಚೀನಾದಿಂದ ಪಡೆದಿರುವ ಸಾಲದ ಪಾಶ
. ಅಮೆರಿಕ, ಬ್ರಿಟನ್ನ ಆರ್ಥಿಕ ನೆರವಿಗೆ ತೊಡಕು
. ಭಯೋತ್ಪಾದನೆ ವಿಚಾರದಲ್ಲಿ ಜಾಗತಿಕ ವಿರೋಧ
. ಭಾರತವಿರೋಧಿ ನಿಲುವಿನಿಂದ ಮೂಲೆಗುಂಪು
. ಪಿಒಕೆ ಅಭಿವೃದ್ಧಿಯಲ್ಲಿ ಹಿಂದುಳಿದಿದೆ
. ಪಾಕ್ ಸರ್ಕಾರದಿಂದ ನಿರ್ಲಕ್ಷ್ಯಕ್ಕೀಡಾಗಿದೆ
. ಪಿಒಕೆ ಜಿಲ್ಲೆಗಳಲ್ಲಿ ಮೂಲಸೌಕರ್ಯ ಇಲ್ಲ
. ಕುಡಿಯುವ ನೀರು, ರಸ್ತೆ ಸೌಲಭ್ಯ ಇಲ್ಲ
. ಬಡತನದಿಂದ ಜನರು ಬೇಸತ್ತಿದ್ದಾರೆ
. ಇತ್ತೀಚೆಗೆ ಹಣದುಬ್ಬರ ಹೆಚ್ಚಾಗುತ್ತಿದೆ
. ಒಂದು ಹೊತ್ತಿನ ಊಟಕ್ಕೂ ಕಷ್ಟ
. ಭಾರತದ ಅಭಿವೃದ್ಧಿಯತ್ತ ನೋಟ
. ಆರ್ಟಿಕಲ್ 370 ರದ್ದತಿ ಬಳಿಕ ಶಾಂತ
. ಭಯೋತ್ಪಾದನೆ ಕೃತ್ಯ ಇಳಿಮುಖವಾಗಿದೆ
. ಗನ್, ಕಲ್ಲು ಹಿಡಿವ ಕೈಗಳಿಗೆ ಉದ್ಯೋಗ
. ಶಾಲಾ, ಕಾಲೇಜುಗಳು ತುಂಬಿ ತುಳುಕುತ್ತಿವೆ
. ಅಭಿವೃದ್ಧಿಯ ತಿರಂಗಾ ಹಾರುತ್ತಿದೆ
. ಆರ್ಥಿಕತೆಯಲ್ಲೂ ಮುನ್ನಡೆ ಸಾಧಿಸುತ್ತಿದೆ
. ಮೂಲಸೌಕರ್ಯ, ಪ್ರವಾಸೋದ್ಯಮ ಪ್ರಗತಿ
. ಜನರ ಜೀವನಮಟ್ಟ ಸುಧಾರಣೆಯಾಗಿದೆ
. 1 ಗ್ಯಾಸ್ ಸಿಲಿಂಡರ್ 12,500 ರೂ.
. 1 ಕೆಜಿ ಗೋಧಿ ಹಿಟ್ಟು 800 ರೂ.
. ಲೀಟರ್ ಹಾಲಿನ ದರ 210 ರೂ.
. 1 ಜಿಬಿ ಇಂಟರ್ನೆಟ್ 1500 ರೂ.
.1 ಕೆಜಿ ಚಿಕನ್ ಕೆಜಿಗೆ 1000 ರೂ.
. 1 ಕೆಜಿ ಬಾಳೆಹಣ್ಣು 200 ರೂ.
ಅವರು ಪಾಕ್ ಬಾಂಬ್ ಬಗ್ಗೆ ಮಾತನಾಡ್ತಾರೆ. ಆದರೆ ಪಾಕಿಸ್ತಾನ ತನ್ನ ಬಾಂಬ್ ಮಾರುವುದಕ್ಕೆ ಖರೀದಿದಾರರನ್ನು ಹುಡುಕುತ್ತಿದೆ. ಪಾಕ್ ಗುಣಮಟ್ಟ ಜನರಿಗೆ ತಿಳಿದಿರುವುದರಿಂದಲೇ ಯಾರೂ ಖರೀದಿಸಲು ಮುಂದೆ ಬರುತ್ತಿಲ್ಲ.| ನರೇಂದ್ರ ಮೋದಿ ಪ್ರಧಾನಿ