ರಿಪ್ಪನ್‌ಪೇಟೆ: ಸಮಾಜದಲ್ಲಿನ ಆಂತರ್ಯವನ್ನು ಹೆಕ್ಕಿ ತೆಗೆದು, ಜನಮನಕ್ಕೆ ರುಚಿಸುವಂತಹ ಸಾಹಿತ್ಯ ರಚನೆಯಿಂದ ಕವಿಗಳು ಪರಿಸರದ ಸೌಂದರ್ಯ ಹೆಚ್ಚಿಸಿದ್ದಾರೆ ಎಂದು ಹೊಸದುರ್ಗ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ನರೇಂದ್ರ ಕುಳಗಟ್ಟೆ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದಿಂದ ಕೆ.ಎಸ್.ನರಸಿಂಹಸ್ವಾಮಿ, ಜಿ.ಎಸ್.ಶಿವರುದ್ರಪ್ಪ ಹಾಗೂ ಗೋಪಾಲಕೃಷ್ಣ ಅಡಿಗರ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಸಪ್ರೇಮ- ಸಮನ್ವಯ-ಸಾಕ್ಷಿಪ್ರಜ್ಞೆ ಭಾವ ತ್ರಿವಳಿ ಕವಿಗಳ ಬದುಕು- ಬರಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರಾವಳಿ ಸೊಗಡಿನಿಂದ ಕವಿತೆ ರಚನೆಗೆ ಪ್ರೇರಣೆಗೊಂಡ ಅಡಿಗರು ನವೋದಯ ಕಾಲದ ಅತ್ಯಂತ ಪ್ರಮುಖ ಕವಿಗಳಲ್ಲೊಬ್ಬರು. ಪ್ರಗತಿಶೀಲ ಸಾಹಿತ್ಯದ ಜತೆಗೆ ಹೊಸ ರೂಪಕಗಳನ್ನು ಮೊದಲು ದಾಖಲಿಸಿದವರು. ಅಡಿಗರ ಸಾಹಿತ್ಯ ಓದಿ ಅನುಭವಿಸಿದರೆ ಬದುಕು ಶ್ರೀಮಂತವಾಗುತ್ತದೆ. ಜನರು ಸಿನಿಮಾ ನಟರನ್ನು ನೆನಪಿಡುತ್ತಾರೆ. ಆದರೆ ಸಾಹಿತಿಗಳನ್ನು ಮರೆಯುತ್ತಿದ್ದಾರೆ. ಯಾವ ಸಮಾಜ ಕವಿಗಳ ಅಂತಃಕರಣವನ್ನು ಮರೆಯುತ್ತೋ ಅಂತಹ ನಾಡು ಬೇಗ ಬರಡಾಗುತ್ತದೆ ಎಂದರು.
ಸಾಗರ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ರತ್ನಾಕರ್ ಮಾತನಾಡಿ, ಜಿಎಸ್‌ಎಸ್ ಅವರು ಶಿಕ್ಷಕರಾಗಿದ್ದ ಕಾಲಘಟ್ಟದಲ್ಲಿ ಒಂದು ಊರಿನ ಕೇರಿಯ ವಿದ್ಯಾರ್ಥಿಗಳಲ್ಲಿ ವಿದ್ವತ್ತನ್ನು ತುಂಬಿದ ಕೀರ್ತಿ ಶಿವರುದ್ರಪ್ಪ ಅವರದು. ಸಾಹಿತ್ಯದಲ್ಲಿ ಮನುಷ್ಯತ್ವದ ಮುಖ ತೋರಿ ಹಣತೆಯ ಕವಿಯಾದರು. ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದ ಸಮನ್ವಯ ಕವಿ ಜಿ.ಎಸ್.ಶಿವರುದ್ರಪ್ಪ ಎಂದು ಬಣ್ಣಿಸಿದರು.
ಸಹ ಪ್ರಾಧ್ಯಾಪಕ ರವೀಶ್ ಮಾತನಾಡಿ, ಮನುಷ್ಯ ಜೀವನದಲ್ಲಿ ನವಭಾವ, ಭಾವಸ್ಫುರಣೆ, ಅನನ್ಯತೆಯನ್ನು ಹೇಗೆ ಗಳಿಸಬೇಕು ಎಂಬುದನ್ನು ಕೆ.ಎಸ್.ನರಸಿಂಹಸ್ವಾಮಿ ತಮ್ಮ ಕವಿತೆಗಳಲ್ಲಿ ರಚಿಸಿ ಪ್ರೇಮಕವಿ ಎನಿಸಿಕೊಂಡಿದ್ದಾರೆ. ಇವರ ಕವಿತೆಗಳು ಸವಾಲನ್ನು ಎದುರಿಸಿ ಗೆಲ್ಲುವ ಬದುಕಿನ ಸ್ಫೂರ್ತಿಗಳಾಗಿವೆ ಎಂದರು.
ಪ್ರಾಚಾರ್ಯ ಡಾ. ವಿರೂಪಾಕ್ಷಪ್ಪ, ಡಾ. ರಜನಿಕಾಂತ್, ಡಾ. ವಿದ್ಯಾ ಪವಾರ್, ಡಾ. ಆರ್.ಕೆ.ರಾಜು, ಹರ್ಷಕುಮಾರ್, ಶಿವಾಜಿ ರಾವ್, ಅಂಜನಕುಮಾರ್ ಇತರರಿದ್ದರು.