ಕವಿ ಡಾ. ಎಂ.ಗೋಪಾಲಕೃಷ್ಣ ಅಡಿಗರ ಜನ್ಮದಿನದ ಅಂಗವಾಗಿ ಸಾಗರದ ಎಲ್‌ಬಿಎಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಕವಿ ನೆನಪು ಕಾರ್ಯಕ್ರಮದಲ್ಲಿ ಡಾ. ಉಮೇಶ್ ಕುಂಸಿ, ಬಿ.ಆರ್.ಜಯಂತ್, ವಿ.ಟಿ.ಸ್ವಾಮಿ, ಡಾ. ಶಿವಕುಮಾರ್, ಭದ್ರಪ್ಪ ಗೌಡ ಇತರರಿದ್ದರು.  
ನ್ಯೂಸ್

ಅಂತರಂಗದ ವಿಚಾರಗಳಿಗೆ ಕಾವ್ಯಗಳೇ ವೇದಿಕೆ

ಶಿವಕುಮಾರ ಎಸ್.ಪಿ.

ಸಾಗರ: ಕಾವ್ಯದ ಅರಿವು ಮೂಡಬೇಕಾದರೆ ಅದಕ್ಕಾಗಿ ಪರಿಶ್ರಮ ಪಡಬೇಕು. ಗೋಪಾಲಕೃಷ್ಣ ಅಡಿಗರು ತಮ್ಮ ಕಾವ್ಯದುದ್ದಕ್ಕೂ ಭೂತ ವರ್ತಮಾನ, ಭವಿಷ್ಯದ ವಿಚಾರಧಾರೆಗಳಿಗೆ ಮುಖಾಮುಖಿ ಆಗುತ್ತಲೇ ಸತ್ಯವನ್ನು ತೆರೆದಿಟ್ಟಿದ್ದರು ಎಂದು ಸಾಗರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಉಮೇಶ್ ಕುಂಸಿ ಹೇಳಿದರು.

ಸಾಗರದ ಲಾಲ್‌ಬಹದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ಮಂಗಳವಾರ ಕವಿ ಡಾ. ಎಂ.ಗೋಪಾಲಕೃಷ್ಣ ಅಡಿಗರ ಜನ್ಮದಿನದ ಅಂಗವಾಗಿ ಟಿ.ಮಹಾಬಲೇಶ್ವರ ಭಟ್ ಅವರ ದತ್ತಿನಿಧಿಯಡಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿತ್ ಸಾಗರ ಘಟಕದಿಂದ ಆಯೋಜಿಸಿದ್ದ ಕವಿ ನೆನಪು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಕಾವ್ಯಗಳನ್ನು ಕಟ್ಟಲು ಸೃಜನಶೀಲತೆ ಅವಶ್ಯ. ಕಾವ್ಯ ನಮ್ಮೊಳಗಿನ ವಿಚಾರಧಾರೆಗಳನ್ನು ತೆರೆದಿಡುತ್ತದೆ. ವ್ಯಕ್ತಿ ಮತ್ತು ಕಾವ್ಯ ಮುಖಾಮುಖಿಯಾಗುತ್ತದೆ. ಇದರಲ್ಲಿ ನಮ್ಮೋಳಗಿನ ಕವಿ ಮತ್ತು ಕಾವ್ಯ ಗೆಲ್ಲುತ್ತದೆ. ಅಡಿಗರು ಜೀವಿತದುದ್ದಕ್ಕೂ ಸಿದ್ಧಾಂತವನ್ನು ನಂಬಿಕೊಂಡು ಬಂದು, ಹಾಗೆಯೇ ಮುನ್ನಡೆದರು. ಅವಕಾಶಗಳಿಂದ ವಂಚಿತರಾದರೂ ಕಾವ್ಯಗಳಲ್ಲಿ ಎಚ್ಚರ, ಶುದ್ಧ ಮನಸ್ಸು, ಸತ್ಯದ ಪ್ರತಿಪಾದನೆಯನ್ನು ನಿರಂತರವಾಗಿ ಮಾಡುತ್ತ ಬಂದರು ಎಂದು ಅಭಿಪ್ರಾಯಪಟ್ಟರು.

ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಉಪಾಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಸಾಗರದ ಲಾಲ್ ಬಹದ್ದೂರ್ ಕಾಲೇಜಿಗೆ ಪ್ರಥಮ ಪ್ರಾಚಾರ್ಯರಾಗಿದ್ದವರು ಗೋಪಾಲಕೃಷ್ಣ ಅಡಿಗರು ಎಂಬುದು ಹೆಮ್ಮೆ. ಪ್ರತಿವರ್ಷ ಅಡಿಗರ ಜನ್ಮದಿನದಂದು ಅವರ ಹೆಸರಿನಲ್ಲಿ ಎಲ್ಲರನ್ನೂ ಒಳಗೊಂಡು ಕಾರ್ಯಕ್ರಮ ನಡೆಸಲಾಗುವುದು ಎಂದರು.

ಪತ್ರಕರ್ತ ದೀಪಕ್ ಸಾಗರ್ ಮಾತನಾಡಿ, ಮೋಹವನ್ನು ಬದಿಗೊತ್ತಿ ಶುದ್ಧ ಮನಸ್ಸಿನಿಂದ ಸತ್ಯಾನ್ವೇಷಣೆ ಮಾಡಬೇಕು. ನಮ್ಮ ಕಾವ್ಯಗಳು ವಿಚಾರ ವಿಮರ್ಶೆಗೆ ಒಳಪಡಬೇಕೇ ಹೊರತು ಭಾವಾವೇಷ ಸೃಷ್ಟಿ ಮಾಡಬಾರದು. ಯಾವುದು ತಪ್ಪು, ಯಾವುದು ನ್ಯಾಯ, ಯಾವುದು ಅನ್ಯಾಯ ಎಂಬುದನ್ನು ತಿಳಿದುಕೊಳ್ಳುವ ಸಾಮರ್ಥ್ಯ ಇರಬೇಕು. ಸರಿಯಾಗಿ ಇಲ್ಲದಿರುವುದನ್ನು ಖಂಡಿಸಿ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಅಡಿಗರು ತಮ್ಮ ಕಾವ್ಯದಲ್ಲಿ ತಿಳಿಸಿದ್ದಾರೆ ಎಂದರು

ಅಡಿಗರ ನೇರ ಶಿಷ್ಯ, ಗಾಯಕ ಭದ್ರಪ್ಪ ಗೌಡ, ಗೋಪಾಲಕೃಷ್ಣ ಅಡಿಗರ ಭಾವಗೀತೆಗಳನ್ನು ಹಾಡಿದರು. ತಾಲೂಕು ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ, ಆನಂದಪುರ ಘಟಕದ ಅಧ್ಯಕ್ಷ ಬಿ.ಡಿ.ರವಿಕುಮಾರ್, ಪಲ್ಲವಿ, ಮಂಜುನಾಥ್, ಎಂಡಿಎಫ್ ಪ್ರಧಾನ ಕಾರ್ಯದರ್ಶಿ ಡಾ. ಶಿವಕುಮಾರ್, ವೆಂಕಟೇಶ್ ಕವಲಕೋಡು, ಕಾಲೇಜಿನ ಪ್ರಾಚಾರ್ಯ ಡಾ. ಲಕ್ಷ್ಮೀಶ್ ಇತರರಿದ್ದರು.