ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಪ್ರತಿ ಹನಿ ನೀರಿನಿಂದ ಹೆಚ್ಚಿನ ಬೆಳೆ ಬೆಳೆಯಲು ಉತ್ತೇಜಿಸುವ ‘ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ’ (ಪಿಎಂಕೆಎಸ್ ವೈ) ಯೋಜನೆ ಯಶಸ್ಸಿಗೆ ಅನುದಾನದ ಕೊರತೆ ಎದುರಾಗಿದೆ. ಯೋಜನೆ ಅಡಿ ಕಾಮಗಾರಿ ಕೈಗೊಳ್ಳಲು ರಾಜ್ಯ ಸರ್ಕಾರ 1,140 ಕೋಟಿ ರೂ. ಮೀಸಲಿಟ್ಟಿದ್ದರೂ ಬಜೆಟ್‌ನಲ್ಲಿ ಅನುದಾನದ ಕೊರತೆ ಇರುವುದಾಗಿ ಕೇಂದ್ರ ಸರ್ಕಾರ ಕೈಚೆಲ್ಲಿರುವುದೇ ಇದಕ್ಕೆ ಕಾರಣ.
ರಾಜ್ಯ ಸರ್ಕಾರದ 1,284 ಕಾಮಗಾರಿಗಳಿಗೆ 3,077 ಕೋಟಿ ರೂ. ಅನುದಾನ ನೀಡುವಂತೆ ಕೇಂದ್ರ ಜಲಶಕ್ತಿ ಇಲಾಖೆ ಮತ್ತು ಕೇಂದ್ರ ಜಲ ಆಯೋಗ ಪ್ರಾದೇಶಿಕ ಕಚೇರಿಗೆ ಸಚಿವ ಎನ್. ಎಸ್. ಬೋಸರಾಜು ಪತ್ರ ಬರೆದು ಮನವಿ ಮಾಡಿದ್ದರು. ಕೇಂದ್ರ ಜಲಶಕ್ತಿ ಇಲಾಖೆ 2024-25ನೇ ಸಾಲಿನ ಬಜೆಟ್‌ನಲ್ಲಿ ಈ ಯೋಜನೆಗೆ 270 ಕೋಟಿ ರೂ. ಮೀಸಲಿಟ್ಟಿತ್ತು. ಅದರಂತೆ ಧಾರವಾಡ ಜಿಲ್ಲೆಗೆ 50 ಕಾಮಗಾರಿಗಳಿಗೆ 76.35 ಕೋಟಿ ರೂ., ತುಮಕೂರು ಜಿಲ್ಲೆಗೆ 26 ಕಾಮಗಾರಿಗಳಿಗೆ 90.97 ಕೋಟಿ ರೂ. ಒಟ್ಟು 167.32 ಕೋಟಿ ರೂ. ಬಿಡುಗಡೆ ಮಾಡಿತ್ತು. ಅನುಮೋದನೆಗೊಂಡ 76 ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ. ಉಳಿದ ಜಿಲ್ಲೆಗಳ ಕಾಮಗಾರಿಗಳಿಗೆ ಅನುದಾನ ನೀಡುವಂತೆ ರಾಜ್ಯ ಸರ್ಕಾರ ೆ.21ರಂದು ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಹಣಕಾಸು ಕೊರತೆ ಕಾರಣಕ್ಕೆ ಹೆಚ್ಚುವರಿ ಯೋಜನೆ ಅಳವಡಿಕೆ ಸಾಧ್ಯವಿಲ್ಲ ಎಂದು ಉಲ್ಲೇಖಿಸಿ ಕೇಂದ್ರ ಸರ್ಕಾರ ಜೂ.11ರಂದು ಪತ್ರ ಮುಖೇನ ಸಂದೇಶ ಕಳಿಸಿದೆ.
ದೂರದೃಷ್ಟಿ ಯೋಜನೆ
ಯೋಜನೆ ಅಡಿ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವುದು, ಪ್ರತಿ ಹನಿಯಿಂದ ಹೆಚ್ಚಿನ ಬೆಳೆ ಬೆಳೆಯುವುದು, ಆ ಮೂಲಕ ಕೃಷಿ ಉತ್ಪಾದನೆ ಮತ್ತು ಆದಾಯ ಹೆಚ್ಚಳವಾಗಿ ಗ್ರಾಮೀಣ ಪ್ರದೇಶವನ್ನು ಸಮೃದ್ಧಗೊಳಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಜತೆಗೆ ನೀರಿನ ಬಳಕೆ ಸುಧಾರಿಸಿ, ಮಳೆ ಮಿಶ್ರಿತ ಪ್ರದೇಶಗಳ ಸಮಗ್ರ ಅಭಿವೃದ್ಧಿ ಸಾಧಿಸುವ ದೂರದೃಷ್ಟಿಯೂ ಯೋಜನೆ ಹಿಂದಿದೆ.
ಯಾರ‌್ಯಾರ ಪಾಲೆಷ್ಟು?
ಕೇಂದ್ರ ಮತ್ತು ರಾಜ್ಯ ಸರ್ಕಾರ 40/60 ಅನುದಾನದಲ್ಲಿ ಯೋಜನೆ ಅಡಿ ಕಾಮಗಾರಿ ಕೈಗೊಳ್ಳಬೇಕಿದೆ
ಯೋಜನೆಯ ಧ್ಯೇಯ?
- ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಹೆಚ್ಚಳ
- ಪ್ರತಿ ಹನಿಗೆ ಹೆಚ್ಚು ಬೆಳೆ ಎಂಬ ೋಷವಾಕ್ಯ
- ನೀರಿನ ಬಳಕೆಯ ದಕ್ಷತೆ ಸುಧಾರಿಸುವುದು
- ಮಳೆನೀರ ಸಂರಕ್ಷಣೆ, ಅಂತರ್ಜಲ ಪೂರಣ
- ಹನಿ, ಸಿಂಚನ ನೀರಾವರಿ ತಂತ್ರಜ್ಞಾನ ಉತ್ತೇಜನ
- ರೈತರಿಗೆ ನೀರಿನ ನಿರ್ವಹಣೆಯ ಬಗ್ಗೆ ತರಬೇತಿ
- ನೀರಾವರಿಯಲ್ಲಿ ಖಾಸಗಿ ಹೂಡಿಕೆ ಆಕರ್ಷಣೆ
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 1284 ಕಾಮಗಾರಿಗಳಿಗೆ 3,077 ಕೋಟಿ ರೂ. ಕೋರಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಈ ಹಿಂದೆ ಕೊಟ್ಟ ಭರವಸೆಯಂತೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ 1140 ಕೋಟಿ ರೂ. ಮೀಸಲಿಟ್ಟಿದೆ.
ಎನ್.ಎಸ್. ಬೋಸರಾಜು-ಸಣ್ಣ ನೀರಾವರಿ ಸಚಿವ