ನ್ಯೂಸ್

ಚೀನಾ ಮೊಂಡು ವಾದ: ಮೋದಿ ಮೌನ ಮುರಿಯಲಿ ಎಂದ ರಾಹುಲ್‌

ಬೀಜಿಂಗ್‌: ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್, ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರ ಪ್ರದೇಶಗಳನ್ನು ಒಳಗೊಂಡಂತೆ ವಿವಾದತ್ಮಕ ಪ್ರದೇಶಗಳನ್ನು ಚೀನಾ ತನ್ನ ನವೀಕರಿಸಿದ ಹೊಸ ಸ್ಟ್ಯಾಂಡರ್ಡ್ ಮ್ಯಾಪ್​​ನಲ್ಲಿ ಉಲ್ಲೇಖಿಸಿದೆ. ಈ ಮೂಲಕ ಚೀನಾ ಗಡಿ ವಿಚಾರದಲ್ಲಿ ತನ್ನ ಮೊಂಡುತನವನ್ನು ಮುಂದುವರಿಸಿದೆ.


ಭಾರತದ ಅರುಣಾಚಲ ಪ್ರದೇಶ, ಲಡಾಖ್‌, ಅಕ್ಸಾಯ್‌ ಚಿನ್‌ ಪ್ರದೇಶವನ್ನೂ ಸೇರಿಸಿಕೊಂಡು ತಾನು ಬಿಡುಗಡೆ ಮಾಡಿರುವ 2023ನೇ ಸಾಲಿನ ನಕ್ಷೆಯನ್ನು ಚೀನಾ ಸಮರ್ಥಿಸಿಕೊಂಡಿದೆ. ಭಾರತದ ಆಕ್ಷೇಪದ ಹೊರತಾಗಿಯೂ, 'ಈ ನಕ್ಷೆ ಕಾನೂನುಬದ್ಧವಾಗಿದೆ ಎಂದು ಅದು ವಾದಿಸಿದೆ.


ಚೀನಾ ಮತ್ತು ವಿಶ್ವದ ವಿವಿಧ ದೇಶಗಳ ರಾಷ್ಟ್ರೀಯ ಗಡಿಗಳ ರೇಖಾಚಿತ್ರ ವಿಧಾನವನ್ನು ಆಧರಿಸಿ ಈ ನಕ್ಷೆಯನ್ನು ರಚಿಸಲಾಗಿದೆ ಎಂದು ಚೀನಾ ಸರ್ಕಾರಿ ಟ್ವಿಟರ್​​ನಲ್ಲಿ ತಿಳಿಸಲಾಗಿದೆ. ಭಾರತ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ಅಸಂಬದ್ಧ ಹೇಳಿಕೆ ನೀಡುವುದರಿಂದ ಯಾವುದೇ ದೇಶದ ಭೂಭಾಗ ನಿಮ್ಮದಾಗದು. ಚೀನಾ ಹಿಂದಿನಿಂದಲೂ ಇಂಥ ವರ್ತನೆ ತೋರಿಕೊಂಡೇ ಬಂದಿದೆ. ಮತ್ತೊಂದು ದೇಶದ ಭೂಭಾಗವನ್ನು ನಿಮ್ಮ ಭೂಪಟದಲ್ಲಿ ತೋರಿಸಿದಾಕ್ಷಣ ಅದು ನಿಮ್ಮದಾಗದು ಎಂದಿದ್ದರು.


ಇದೇ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್​​ ಗಾಂಧಿ, ನಾನು ಲಡಾಖ್‌ನಿಂದ ಹಿಂತಿರುಗಿದ್ದೇನೆ ಮತ್ತು ಲಡಾಖ್‌ನಲ್ಲಿ ಒಂದು ಇಂಚು ಭೂಮಿಯೂ ಕಳೆದುಹೋಗಿಲ್ಲ ಎಂದು ಪ್ರಧಾನಿ ಹೇಳಿರುವುದನ್ನು ನಾನು ವರ್ಷಗಳಿಂದ ಹೇಳುತ್ತಿದ್ದೇನೆ. ಒಂದು ಸಂಪೂರ್ಣ ಸುಳ್ಳು, ಚೀನಾ ನಮ್ಮ ಭೂಮಿಯನ್ನು ಆಕ್ರಮಿಸಿಕೊಂಡಿದೆ ಎಂದು ಇಡೀ ಲಡಾಖ್‌ಗೆ ತಿಳಿದಿದೆ ಎಂದರು. ಈ ನಕ್ಷೆಯ ವಿಷಯವು ತುಂಬಾ ಗಂಭೀರವಾಗಿದೆ.

ಆದರೆ ಅವರು ಈಗಾಗಲೇ ನಮ್ಮ ಭೂಮಿಯನ್ನು ಕಸಿದುಕೊಂಡಿದ್ದಾರೆ ಮತ್ತು ಪ್ರಧಾನಿ ಅದರ ಬಗ್ಗೆಯೂ ಏನಾದರೂ ಹೇಳಬೇಕು ಎಂದು ರಾಹುಲ್‌ ಆಗ್ರಹಿಸಿದರು.


ರಾಹುಲ್‌ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಹುಲ್‌ ಆರೋಪ ನಿರಾಧಾರ. ಚೀನಾ ಭೂಮಿ ಕಬಳಿಸಿದ್ದೇ ಆದಲ್ಲಿ ಅದು ನೆಹರು ಅವಧಿಯಲ್ಲಿ ಎಂದು ತಿರುಗೇಟು ನೀಡಿದ್ದಾರೆ.