ನ್ಯೂಸ್

ವಿಶ್ವದ ವಿಶ್ವಾಸಾರ್ಹ ನಾಯಕರಲ್ಲಿ ಪ್ರಧಾನಿ ಮೋದಿಗೆ ಮತ್ತೆ ಅಗ್ರಸ್ಥಾನ; ಟ್ರಂಪ್​ಗೆ ಹಿನ್ನಡೆ! | Narendra Modi

Narendra Modi: ಅಮೆರಿಕ ಮೂಲದ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ 'ಡೆಮಾಕ್ರಟಿಕ್ ಲೀಡರ್ ಅಪ್ರೂವಲ್ ರೇಟಿಂಗ್ಸ್' ನ ಇತ್ತೀಚಿನ ಜಾಗತಿಕ ಪಟ್ಟಿಯಲ್ಲಿ 75% ರಷ್ಟು ಬೆಂಬಲ ಪಡೆಯುವ ಮೂಲಕ ವಿಶ್ವದ ಅತ್ಯಂತ ವಿಶ್ವಾಸಾರ್ಹ ನಾಯಕರಾಗಿ ಮತ್ತೊಮ್ಮೆ ಅಗ್ರಸ್ಥಾನ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಅಮೇರಿಕ ಮೂಲದ ವ್ಯವಹಾರ ಗುಪ್ತಚರ ಮತ್ತು ದತ್ತಾಂಶ ವಿಶ್ಲೇಷಣೆ ಕಂಪನಿಯಾಗಿರುವ ಮಾರ್ನಿಂಗ್ ಕನ್ಸಲ್ಟ್, ಇತ್ತೀಚಿನ ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಸಮೀಕ್ಷೆಯನ್ನು 2025 ರ ಜುಲೈ 4 ರಿಂದ 10 ರವರೆಗೆ ಕೈಗೊಳ್ಳಲಾಗಿದ್ದು, ಈ ಸಮೀಕ್ಷೆಯಲ್ಲಿ ವಿವಿಧ ರಾಷ್ಟ್ರಗಳ ಸಾವಿರಾರು ಜನರೊಂದಿಗೆ ಸಂವಹನ ನಡೆಸಿ, ಅವರ ಅಭಿಪ್ರಾಯ ಪಡೆದು ಈ ವರದಿ ಸಿದ್ಧಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಮೀಕ್ಷೆಯಲ್ಲಿ ಭಾಗವಹಿಸಿದ ಪ್ರತಿ ನಾಲ್ಕು ಜನರಲ್ಲಿ ಮೂವರು ಮೋದಿಯನ್ನು ಪ್ರಜಾಪ್ರಭುತ್ವ ನಾಯಕ ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಶೇ 18 ಪ್ರತಿಶತ ಜನರು ಇದಕ್ಕೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿದ್ದಾರೆ. ಸುಮಾರು ಶೇ 7 ರಷ್ಟು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

ಈ ಪಟ್ಟಿಯಲ್ಲಿ ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ 59% ಎರಡನೇ ಸ್ಥಾನದಲ್ಲಿದ್ದು, ಅಧಿಕಾರ ವಹಿಸಿಕೊಂಡ ಕೇವಲ ಒಂದು ತಿಂಗಳಲ್ಲಿ ಈ ಮಟ್ಟದ ಜನಮನ್ನಣೆ ಗಳಿಸಿದ್ದಾರೆ. ಅಚ್ಚರಿ ಎಂಬಂತೆ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂಟನೇ ಸ್ಥಾನ ಪಡೆದುಕೊಂಡಿದ್ದಾರೆ.(ಏಜೆನ್ಸೀಸ್)