ನವದೆಹಲಿ: ಲೋಕಸಭಾ ಚುನಾವಣೆ 2024ರ ತೀರ್ಪು ದೇಶದ ಜನರು ಪ್ರಚಾರವನ್ನು ತಿರಸ್ಕರಿಸಿದ್ದಾರೆ ಮತ್ತು ನಂಬಿಕೆಯ ರಾಜಕೀಯಕ್ಕೆ ಆದ್ಯತೆ ನೀಡಿದ್ದಾರೆ ಎಂಬುದನ್ನು ತೋರಿಸಿದೆ. ಜನರನ್ನು ದಾರಿ ತಪ್ಪಿಸುವ ರಾಜಕೀಯವನ್ನು ಸೋಲಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ರಾಜ್ಯಸಭೆಯಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ, ಅಭಿವೃದ್ಧಿ ಹೊಂದಿದ ಭಾರತ, ಸ್ವಾವಲಂಬಿ ಭಾರತದ ಪಯಣವನ್ನು ಬಲಪಡಿಸಲು ಮತ್ತು ಯಶಸ್ಸಿನ ಸಂಕಲ್ಪವನ್ನು ಕೊಂಡೊಯ್ಯಲು ದೇಶದ ಜನರು ಮೂರನೇ ಬಾರಿಗೆ ಈ ಅವಕಾಶವನ್ನು ನೀಡಿದ್ದಾರೆ. ದೇಶದ ಜನತೆ ನಮ್ಮ ಮೇಲೆ ನಂಬಿಕೆ ಇಟ್ಟಿದ್ದು, ಈ ವಿಶ್ವಾಸದ ಆಧಾರದ ಮೇಲೆ ಜನತೆ ನಮಗೆ ಮತ್ತೊಂದು ಅವಕಾಶ ನೀಡಿದ್ದಾರೆ ಎಂದು ಹೇಳಿದರು.
ಆರು ದಶಕಗಳಲ್ಲಿ 10 ವರ್ಷಗಳ ನಂತರ ಅದೇ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಇದೇ ಮೊದಲು. ಕಳೆದ 10 ವರ್ಷಗಳ ಸಾಧನೆಗಳಿಗೆ ಅನುಮೋದನೆಯ ಮುದ್ರೆ ಮಾತ್ರವಲ್ಲ, ಭವಿಷ್ಯದ ನಿರ್ಣಯಗಳಿಗೆ ಇದು ಅನುಮೋದನೆಯ ಮುದ್ರೆಯಾಗಿದೆ ಎಂದಿದ್ದಾರೆ. ಅಲ್ಲದೆ ಕಳೆದ 10 ವರ್ಷಗಳಲ್ಲಿ ನಮ್ಮ ಆರ್ಥಿಕತೆ ಹತ್ತರಿಂದ ಐದನೇ ಸ್ಥಾನಕ್ಕೆ ಏರಿರುವುದನ್ನು ದೇಶ ಕಂಡಿದೆ ಎಂದು ತಿಳಿಸಿದರು.
ಯಾರೇ ಅಧಿಕಾರದಲ್ಲಿದ್ದರೂ ದೇಶ ಬೆಳೆಯುವುದು ನಿಶ್ಚಿತ ಎಂಬ ಕಾಂಗ್ರೆಸ್ ಹೇಳಿಕೆಗೆ ಸ್ವಯಂ-ಪೈಲಟ್ ಮೋಡ್‌ನಲ್ಲಿ ಸರ್ಕಾರವನ್ನು ನಡೆಸುವವರು ಅಂತಹ ಹೇಳಿಕೆಗಳನ್ನು ಮಾತ್ರ ಮಾಡಬಹುದು ಎಂದು ಮೋದಿ ಟೀಕಿಸಿದರು. ಪ್ರತಿಪಕ್ಷಗಳು ದೇಶದ ಜನರ ನಿರ್ಧಾರಕ್ಕೆ ಕಪ್ಪುಚುಕ್ಕೆ ತರುವ ಪ್ರಯತ್ನ ಮಾಡುತ್ತಿವೆ ಎಂದರು.
ನಂತರ, ರಾಜ್ಯಸಭೆಯಲ್ಲಿ ಮೋದಿ ಭಾಷಣದ ವೇಳೆ ಪ್ರತಿಪಕ್ಷಗಳ ಸಂಸದರು ಹೊರನಡೆದರು. ಸುಳ್ಳು ಹಬ್ಬಿಸುವವರಿಗೆ ಸತ್ಯವನ್ನು ಕೇಳುವ ಶಕ್ತಿ ಇಲ್ಲ ಎಂಬುದನ್ನು ದೇಶ ಗಮನಿಸುತ್ತಿದೆ. ಸತ್ಯವನ್ನು ಎದುರಿಸುವ ಧೈರ್ಯವಿಲ್ಲದವರಿಗೆ ಈ ಚರ್ಚೆಗಳಲ್ಲಿ ಉಂಟಾದ ಪ್ರಶ್ನೆಗಳಿಗೆ ಉತ್ತರವನ್ನು ಕೇಳುವ ಧೈರ್ಯವಿಲ್ಲ. ಸದನದ ಮೇಲ್ಮನೆಯನ್ನು ಅವಮಾನಿಸುತ್ತಿದ್ದಾರೆ ಎಂದು ಮೋದಿ ಹೇಳಿದರು. (ಏಜೆನ್ಸೀಸ್)