ನ್ಯೂಸ್

ಬೆಂಗಳೂರು ಪ್ರಕೃತಿಯೊಂದಿಗೆ ಬಾಂಧವ್ಯ ಹೊಂದಿದೆ; ಕನ್ನಡದಲ್ಲೇ ಮೆಚ್ಚುಗೆ ಸೂಚಿಸಿದ ಪ್ರಧಾನಿ ಮೋದಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಪರಿಸರ ಪ್ರೀತಿಯ ಬಗೆಗೆ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ. ಬೆಂಗಳೂರು ನಗರವು ಪ್ರಕೃತಿಯೊಂದಿಗೆ ಗಾಢವಾದ ಬಾಂಧವ್ಯವನ್ನು ಹೊಂದಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುಭಾಷಿಣಿ ಚಂದ್ರಮಣಿ ಎಂಬುವರು, ಸದ್ಯ ಪರಿಸರಾಸಕ್ತರ ಗಮನ ಸೆಳೆಯುತ್ತಿರುವ ಬೆಂಗಳೂರು ನಗರದಲ್ಲಿರುವ ವಿವಿಧ ಜಾತೀಯ ಹೂವುಗಳ ಫೋಟೋವನ್ನು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದರು. ಜತೆಗೆ ನಿಮ್ಮಲ್ಲಿ ಕೆಲವರು ನಗರಗಳನ್ನು ಇಷ್ಟ ಪಡದಿರಬಹುದು ಅಥವಾ ತಿರಸ್ಕರಿಸಬಹುದು. ಜತೆಗೆ ಬೆಂಗಳೂರಿನ ಟ್ರಾಫಿಕ್ ಬಗ್ಗೆ ಶಪಿಸಬಹುದು. ಇದೆಲ್ಲದರ ಹೊರತಾಗಿ ರಾಜಧಾನಿಯಲ್ಲಿ ಕಣ್ಣಿಗೆ ಬೀಳುತ್ತಿರುವ ಹೂವುಗಳು ಬೆಂಗಳೂರಿನೊಂದಿಗೆ ಪ್ರೀತಿ ಬೆಳೆಯುವಂತೆ ಮಾಡುತ್ತದೆ ಎಂದು ಬರೆದುಕೊಂಡಿದ್ದರು.

ಇದೀಗ ಪ್ರಧಾನಿ ಮೋದಿ ಸುಭಾಷಿಣಿ ಚಂದ್ರಮಣಿ ಅವರ ಟ್ವೀಟ್​ಗೆ ಪ್ರತಿಕ್ರಿಯಿಸುತ್ತಾ, ಬೆಂಗಳೂರು ಮತ್ತು ಅದರ ಮರಗಳ ಬಗೆಗಿನ ಆಸಕ್ತಿದಾಯಕ ವಿಷಯವಾಗಿದೆ. ಬೆಂಗಳೂರು ನಗರವು ಮರಗಳು ಮತ್ತು ಕೆರೆಗಳು ಸೇರಿದಂತೆ ಪ್ರಕೃತಿಯೊಂದಿಗೆ ಬಹಳ ಗಾಢವಾದ ಬಾಂಧವ್ಯವನ್ನು ಹೊಂದಿದೆ. ತಮ್ಮ ಪಟ್ಟಣಗಳು ಮತ್ತು ನಗರಗಳ ಬಗೆಗಿನ ಇಂತಹ ಅಂಶಗಳನ್ನು ಪ್ರಚುರಪಡಿಸುವಂತೆ ನಾನು ಇತರರನ್ನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.