ನವದೆಹಲಿ: ಬ್ರಿಟನ್ ಪ್ರಿನ್ಸ್ ಫಿಲಿಪ್ (Duke of Edinburgh) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಶುಕ್ರವಾರ ಟ್ವಿಟ್ ಮಾಡಿರುವ ಪ್ರಧಾನಿ, 'ಈ ದುಃಖದ ಸಮಯದಲ್ಲಿ ನನ್ನ ಪ್ರಾರ್ಥನೆ ಬ್ರಿಟಿಷ್ ರಾಜಮನೆತನ ಹಾಗೂ ಬ್ರಿಟಿಷ್ ಜನರೊಂದಿಗೆ ಇರುತ್ತದೆ. ದೊರೆ ಫಿಲಿಪ್ ಅವರು ಮಿಲಿಟರಿಯಲ್ಲಿ ವಿಶಿಷ್ಟ ಹೆಸರು ಮಾಡಿದ್ದರು. ಅವರು ಸಮುದಾಯದ ಶ್ರೇಯೋಭಿವೃದ್ಧಿಗೆ ತಮ್ಮದೇಯಾದ ಕಾಣಿಕೆ ನೀಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ' ಎಂದು ಮೋದಿ ಸಂತಾಪ ಸೂಚಿಸಿದ್ದಾರೆ.
ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರ ಗಂಡ ಫಿಲಿಪ್ ಅವರು ಇಂದು ಬಕಿಂಗ್ ಹ್ಯಾಮ್ ಅರಮನೆಯಲ್ಲಿ ನಿಧನರಾದರು. ಅವರಿಗೆ 99 ವರ್ಷ ವಯಸ್ಸಾಗಿತ್ತು. ಇತ್ತೀಚೆಗಷ್ಟೇ ಅವರು ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬ್ರಿಟಿಷ್ ಅರಸೊತ್ತಿಗೆಯನ್ನು ಅತಿಹೆಚ್ಚು ವರ್ಷ ಆಳಿದ ಕೀರ್ತಿ ರಾಜ ಫಿಲಿಪ್ ಅವರಿಗೆ ಸಲ್ಲುತ್ತದೆ. ಅವರು 2017 ರಲ್ಲಿ ಸಾರ್ವಜನಿಕ ಜೀವನಕ್ಕೆ ವಿದಾಯ ಹೇಳಿದ್ದರು. ಜೂನ್ 10 ಕ್ಕೆ ಅವರು ನೂರು ವರ್ಷಗಳನ್ನು ಪೂರೈಸಲಿದ್ದರು.
ಬ್ರಿಟನ್ ರಾಣಿ ಎರಡನೇ ಎಲಿಜಬತ್ ಅವರನ್ನು ಫಿಲಿಪ್ ಅವರು 1947 ರಲ್ಲಿ ವಿವಾಹವಾಗಿದ್ದರು. ಅವರು 4 ಮಕ್ಕಳನ್ನು, 8 ಮೊಮ್ಮಕ್ಕಳನ್ನು ಹಾಗೂ 9 ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ.