ನ್ಯೂಸ್

ಪ್ರಧಾನಿ ಮೊದಿಯನ್ನು ಭೇಟಿಯಾದ ಚೀನಾದ ವಿದೇಶಾಂಗ ಸಚಿವ ವಾಂಗ್; ಗಡಿಯಲ್ಲಿನ ಸ್ಥಿರತೆ ಬಗ್ಗೆ ಚರ್ಚೆ | Narendra Modi

Narendra Modi: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (ಆಗಸ್ಟ್​ 19) ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ನವದೆಹಲಿಯ ಅವರ ನಿವಾಸದಲ್ಲಿ ಭೇಟಿಯಾದರು. ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಸ್ಥಿರಗೊಳಿಸಲು ಮತ್ತು ಬಲಪಡಿಸಲು ಈ ಭೇಟಿ ಅನುಕೂಲಕರ ಎನ್ನಲಾಗಿದೆ.

ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಪ್ರಧಾನಿ ಮೋದಿಯನ್ನು ಆಹ್ವಾನಿಸಿದರು.

ಶಾಂತಿ ಮತ್ತು ನೆಮ್ಮದಿ ಮುಖ್ಯ ಎಂದ ಪ್ರಧಾನಿ ಮೋದಿ

ಈ ಭೇಟಿಯ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​​ ಹಂಚಿಕೊಂಡಿರುವ ಪ್ರಧಾನಿ ಮೋದಿ, ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿ ಸಂತೋಷ ತಂದಿದ್ದು, ಕಳೆದ ವರ್ಷ ಕಜಾನ್‌ನಲ್ಲಿ ಅಧ್ಯಕ್ಷ ಕ್ಸಿ ಅವರೊಂದಿಗಿನ ನನ್ನ ಭೇಟಿಯ ನಂತರ, ಭಾರತ-ಚೀನಾ ಸಂಬಂಧಗಳು ಪರಸ್ಪರರ ಹಿತಾಸಕ್ತಿಗಳು ಮತ್ತು ಸೂಕ್ಷ್ಮತೆಗಳನ್ನು ಗೌರವಿಸುವ ಮೂಲಕ ಸ್ಥಿರವಾದ ಪ್ರಗತಿಯನ್ನು ಸಾಧಿಸಿವೆ ಎಂದು ಬರೆದುಕೊಂಡಿದ್ದಾರೆ.

SCO ಶೃಂಗಸಭೆಯ ಹೊರತಾಗಿ ಟಿಯಾಂಜಿನ್‌ನಲ್ಲಿ ನಡೆಯುವ ನಮ್ಮ ಮುಂದಿನ ಸಭೆಯನ್ನು ಎದುರು ನೋಡುತ್ತಿದ್ದೇನೆ. ಭಾರತ ಮತ್ತು ಚೀನಾ ನಡುವಿನ ಸ್ಥಿರ, ಊಹಿಸಬಹುದಾದ, ರಚನಾತ್ಮಕ ಸಂಬಂಧಗಳು ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ ಮತ್ತು ಸಮೃದ್ಧಿಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ ಎಂದಿದ್ದಾರೆ.

ಈ ಸಭೆಯಲ್ಲಿ, ದ್ವಿಪಕ್ಷೀಯ ಸಂಬಂಧಗಳಿಗೆ ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿ ಅತ್ಯಗತ್ಯ ಎಂದು ಪ್ರಧಾನಿ ಒತ್ತಿ ಹೇಳಿದ್ದು ಮತ್ತು ಸಂಬಂಧಗಳಲ್ಲಿನ ಸ್ಥಿರ, ಸಕಾರಾತ್ಮಕ ಪ್ರಗತಿಯನ್ನು ಸ್ವಾಗತಿಸಿದರು ಎಂದು ಮೂಲಗಳು ತಿಳಿಸಿವೆ.

ಗಡಿಯಲ್ಲಿನ ಸ್ಥಿರತೆಗೆ ಸಂತಸ ವ್ಯಕ್ತಪಡಿಸಿದ ವಾಂಗ್ ಯಿ

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮಾತನಾಡಿ, ಎರಡೂ ಕಡೆಯವರು ಸಂವಹನದ ಮೂಲಕ ಪರಸ್ಪರ ನಂಬಿಕೆಯನ್ನು ಹೆಚ್ಚಿಸಬೇಕು, ವಿನಿಮಯ ಮತ್ತು ಸಹಕಾರದ ಮೂಲಕ ಸಾಮಾನ್ಯ ಹಿತಾಸಕ್ತಿಗಳನ್ನು ವಿಸ್ತರಿಸಬೇಕು ಮತ್ತು ಗಡಿಯಲ್ಲಿ ನಿರ್ದಿಷ್ಟ ಸಮಸ್ಯೆಗಳನ್ನು ಸರಿಯಾಗಿ ಪರಿಹರಿಸಬೇಕು, ಸದ್ಯ ಗಡಿಯಲ್ಲಿ ಪುನಃಸ್ಥಾಪಿಸಲಾದ ಸ್ಥಿರತೆಯನ್ನು ನೋಡಿ ನಾವು ಹರ್ಷಿತರಾಗಿದ್ದೇವೆ ಎಂದು ಅವರು ಹೇಳಿದರು.

ದ್ವಿಪಕ್ಷೀಯ ಸಂಬಂಧವು ಸುಧಾರಣೆ ಮತ್ತು ಬೆಳವಣಿಗೆಗೆ ಒಂದು ಪ್ರಮುಖ ಅವಕಾಶವನ್ನು ಎದುರಿಸುತ್ತಿದೆ. ನಮ್ಮ ಆಹ್ವಾನದ ಮೇರೆಗೆ ಪ್ರಧಾನ ಮಂತ್ರಿಯವರು SCO ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾಕ್ಕೆ ಭೇಟಿ ನೀಡುವುದಕ್ಕೆ ಚೀನಾ ಜನ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ ಎಂದು ತಿಳಿಸಿದರು.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ.50 ಕ್ಕೆ ದುಪ್ಪಟ್ಟುಗೊಳಿಸಿದ ನಂತರ ಭಾರತ-ಯುಎಸ್ ಸಂಬಂಧಗಳಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ವಾಂಗ್ ಯಿ ಅವರ ಭಾರತ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.(ಏಜೆನ್ಸೀಸ್)