ನ್ಯೂಸ್

ಹಿಂದಿನಂತಿರದು ಕರೊನೋತ್ತರ ಬದುಕು: ಸರ್ವ ಪಕ್ಷಗಳ ನಾಯಕರ ಸಭೆಯಲ್ಲಿ ಪ್ರಧಾನಿ ಅಭಿಪ್ರಾಯ, ಲಾಕ್​ಡೌನ್ ವಿಸ್ತರಣೆ ಸುಳಿವು

ನವದೆಹಲಿ: ಕರೊನಾ ಸೋಂಕಿತ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 14ರವರೆಗಿದ್ದ ದೇಶವ್ಯಾಪಿ ಲಾಕ್​ಡೌನ್ ಮತ್ತೆ ಮುಂದುವರಿಸುವ ಸುಳಿವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಹಾಗಿದ್ದರೂ, ಕರೊನಾ ಹರಡುವಿಕೆ ಕಡಿಮೆ ಇರುವ ಪ್ರದೇಶ, ಜಿಲ್ಲೆಗಳಲ್ಲಿ ಲಾಕ್​ಡೌನ್ ಸಡಿಲಗೊಳಿಸಿ, ಕೆಲ ಕ್ಷೇತ್ರಗಳಲ್ಲಿ ಆರ್ಥಿಕ ಚಟುವಟಿಕೆಗೆ ಅವಕಾಶ ನೀಡುವ ಕುರಿತೂ ಚಿಂತನೆ ನಡೆಸಿದೆ. ಈ ಸಂಬಂಧ ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ವಾರಾಂತ್ಯದಲ್ಲಿ ಪ್ರಧಾನಿ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಲಿದ್ದು, ಲಾಕ್​ಡೌನ್ ಕುರಿತ ನಿರ್ಣಯ ಪ್ರಕಟಿಸಲಿದ್ದಾರೆ.

ಐದು ಸಂಸದರಿಗಿಂತ ಹೆಚ್ಚಿರುವ ರಾಜಕೀಯ ಪಕ್ಷಗಳ ಸಂಸದೀಯ ನಾಯಕರೊಂದಿಗೆ ವಿಡಿಯೋ ಕಾನ್ಪರೆನ್ಸ್ನಲ್ಲಿ ಮಾತುಕತೆ ನಡೆಸಿದ ವೇಳೆ ಪ್ರಧಾನಿ ಕರೊನಾ ಸ್ಥಿತಿಗತಿ ಕುರಿತ ವಿಚಾರ ವಿನಿಮಯ ನಡೆಸಿ, ಹಲವು ವಿಷಯಗಳ ಬಗ್ಗೆ ನಿಲುವು ಮುಂದಿಟ್ಟರು. ಇದು ಪ್ರತಿ ವ್ಯಕ್ತಿಯ ಬದುಕಿನ ಪ್ರಶ್ನೆ. ಅನಿವಾರ್ಯವಾಗಿ ಗಂಭೀರ ಕ್ರಮ ಕೈಗೊಳ್ಳಲೇಬೇಕಾದ ಸ್ಥಿತಿ ನಮ್ಮ ಮುಂದಿದೆ ಮತ್ತು ಲಾಕ್​ಡೌನ್ ಮುಂದುವರಿಸದೇ ಬೇರೆ ಆಯ್ಕೆ ನಮ್ಮ ಮುಂದಿಲ್ಲ ಎಂದು ಹೇಳಿದ್ದಾರೆ. ಸರ್ವ ಪಕ್ಷಗಳ ಮುಖಂಡರು ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಆದರೆ, ಕೆಲವು ರಾಜ್ಯಗಳಲ್ಲಿ ಪಿಪಿಐ ಕಿಟ್ ಸೇರಿ ವೈದ್ಯಕೀಯ ಸಲಕರಣೆಗಳ ಕೊರತೆಯಿದ್ದು, ಕೇಂದ್ರ ತಕ್ಷಣವೇ ಈ ರಾಜ್ಯಗಳ ನೆರವಿಗೆ ಧಾವಿಸಬೇಕು ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬೀ ಆಜಾದ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ದೇಶದಲ್ಲಿ ಕೋವಿಡ್-19ನಿಂದಾಗಿ ಸಾಮಾಜಿಕ ತುರ್ತು ಪರಿಸ್ಥಿತಿ ನಿರ್ವಣವಾಗಿದೆ. ಇದೊಂದು ದೀರ್ಘಕಾಲದ ಹೋರಾಟವಾಗಿದ್ದು, ಜನರಿಗೆ ಕಷ್ಟವೆನಿಸಿದರೂ ನಾವು ಕಠಿಣ ಕ್ರಮ ತೆಗೆದುಕೊಳ್ಳಲೇಬೇಕು. ಜನರ ಜೀವನವನ್ನು ರಕ್ಷಿಸುವುದೇ ನಮ್ಮ ಸರ್ಕಾರದ ಆಧ್ಯತೆಯಾಗಿದೆ. ಕರೊನಾ ವೈರಸ್ ಪೂರ್ವದಲ್ಲಿದ್ದ ಬದುಕಿಗೂ ಕರೊನಾ ನಂತರದ ಬದುಕಿಗೂ ಬಹಳ ವ್ಯತ್ಯಾಸವಿರಲಿದೆ ಎಂದು ಪ್ರಧಾನಿ ಸಭೆಯಲ್ಲಿ ಪುನರುಚ್ಚರಿಸಿದ್ದಾರೆ.

ಕರೊನಾ ಮಹಾಮಾರಿ ನಿರ್ವಿುಸಿರುವ ಬಿಕ್ಕಟ್ಟಿನ ಪರಿಣಾಮ ಭವಿಷ್ಯದ ದಿನಗಳಲ್ಲಿ ಭಾರತ ಅತಿದೊಡ್ಡ ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆ ಬಗ್ಗೆ ತಜ್ಞರು, ರಾಜಕೀಯ ಪಂಡಿತರು ಅಭಿಪ್ರಾಯಪಡುತ್ತಿರುವ ಮಧ್ಯೆ ಕೇಂದ್ರ ಸರ್ಕಾರ ಕೂಡ ಭವಿಷ್ಯದ ಆರ್ಥಿಕ ಸವಾಲಿನ ಬಗ್ಗೆ ಮೊದಲ ಹಂತದ ಚರ್ಚೆ ನಡೆಸಿದೆ. ಕರೊನೋತ್ತರ ದಿನಗಳ ಸವಾಲಿಗೆ ಜನರನ್ನು ಈಗಲೇ ಮಾನಸಿಕವಾಗಿ ಸಿದ್ಧಪಡಿಸಬೇಕಿದೆ. ಹೀಗಾಗಿಯೇ ಸಭೆಯಲ್ಲಿ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆನ್ನಲಾಗಿದೆ.

ಸಿಎಂಗಳ ಜತೆಗಿನ ಸಭೆ ನಿರ್ಣಾಯಕ

ಕರೊನಾ ವೈರಸ್ ಹರಡುವಿಕೆಯಿಂದ ಆತಂಕಗೊಂಡಿರುವ ಅನೇಕ ರಾಜ್ಯ ಸರ್ಕಾರಗಳು ಲಾಕ್​ಡೌನ್ ಮುಂದುವರಿಸಬೇಕು ಎಂಬ ಸಲಹೆ ಕುರಿತು ಸರ್ವ ಪಕ್ಷಗಳ ನಾಯಕರಿಗೆ ಪ್ರಧಾನಿ ಮಾಹಿತಿ ನೀಡಿದರು. ಈ ನಿಟ್ಟಿನಲ್ಲಿ ಏಪ್ರಿಲ್ 11ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ನಡೆಸಲಿದ್ದು, ಸಭೆ ಬಳಿಕ ಲಾಕ್​ಡೌನ್ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲು ಪ್ರಧಾನಿ ನಿರ್ಧರಿಸಿದ್ದಾರೆ. ಲಾಕ್​ಡೌನ್ ಕುರಿತು ಪ್ರಧಾನಿ ವಿಪಕ್ಷಗಳು, ಉದ್ಯಮಿಗಳು ಸೇರಿ ಸಂಬಂಧಪಟ್ಟ ಎಲ್ಲರೊಂದಿಗೂ ಚರ್ಚೆ, ಸಂವಾದ, ಮಾತುಕತೆ ನಡೆಸುತ್ತಿರುವ ಬಗ್ಗೆ ಮೆಚ್ಚುಗೆ ಕೇಳಿಬಂದಿದೆ.

ಮಾಸ್ಕ್ ಕಡ್ಡಾಯ

ಮಹಾರಾಷ್ಟ್ರದ ಮುಂಬೈನಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದ್ದು, ಉಲ್ಲಂಘಿಸಿದವರನ್ನು ಬಂಧಿಸುವಂತೆ ಆದೇಶಿಸಲಾಗಿದೆ. ಮನೆಯಿಂದ ಹೊರಬರುವ ಜನರು ಮಾಸ್ಕ್ ಧರಿಸುವುದು ಕಡ್ಡಾಯ. ಕಚೇರಿಯಲ್ಲಿರುವವರು, ಕಾರು ಇನ್ನಿತರ ವಾಹನದಲ್ಲಿದ್ದರೂ ಮಾಸ್ಕ್ ಧರಿಸಬೇಬೇಕು ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ ಸೂಚಿಸಿದೆ. ಮಾಸ್ಕ್​ಗಳ ಸೋಂಕು ಮುಕ್ತವಾಗಿರಬೇಕು ಮತ್ತು ವೈದ್ಯಕೀಯ ಒಪ್ಪಿತ ಮಾನದಂಡಕ್ಕೆ ಅನುಗುಣವಾಗಿರಬೇಕು ಎಂದು ಮಹಾನಗರ ಪಾಲಿಕೆ ಹೇಳಿದೆ.

ದೇಶದ 400 ಜಿಲ್ಲೆಗಳಲ್ಲಿ ಒಂದೇ ಒಂದು ಕರೊನಾ ಕೇಸು ಪತ್ತೆಯಾಗಿಲ್ಲ. ಆದರೆ ಲಾಕ್​ಡೌನ್ ಹೇಗಿರಬೇಕು ಎಂಬ ಬಗ್ಗೆ ಆಯಾ ರಾಜ್ಯಗಳು ತಮ್ಮ ಅಭಿಪ್ರಾಯ ನೀಡಬೇಕಾಗುತ್ತದೆ ಮತ್ತು ಪರಿಣಾಮಕಾರಿ ಅನುಷ್ಠಾನ ಸರ್ಕಾರಗಳ ಕೈಯಲ್ಲೇ ಇದೆ. ಕೇಂದ್ರ-ರಾಜ್ಯ ಸರ್ಕಾರಗಳು ಒಟ್ಟಾಗಿ ಈ ಮಹಾಮಾರಿ ವಿರುದ್ಧ ಸೆಣೆಸಬೇಕಿದೆ. | ರಾಜೀವ್ ಕುಮಾರ್ ನೀತಿ ಆಯೋಗದ ಉಪಾಧ್ಯಕ್ಷ