ನ್ಯೂಸ್

ಪ್ಯಾರಿಸ್​ ಒಲಿಂಪಿಕ್ಸ್: ಕಂಚಿನ ಪದಕ ಗೆದ್ದ ಮನು-ಸರಬ್ಜೋತ್ ಸಿಂಗ್​ಗೆ ‘ನಮೋ’ ಅಭಿನಂದನೆ

ನವದೆಹಲಿ: ಪ್ರಸಕ್ತ ಪ್ಯಾರಿಸ್​ನಲ್ಲಿ ನಡೆಯುತ್ತಿರುವ ನಾಲ್ಕನೇ ದಿನದ ಒಲಿಂಪಿಕ್ ಗೇಮ್ಸ್ 2024ರಲ್ಲಿ ಮನು-ಸರಬ್ಜೋತ್ ಸಿಂಗ್ ಜೋಡಿ ಮಂಗಳವಾರ(ಜುಲೈ 30) 10 ಮೀಟರ್ ಏರ್ ಪಿಸ್ತೂಲ್ ಡಬಲ್ಸ್​ ಶೂಟಿಂಗ್ ಸ್ಪರ್ಧೆಯಲ್ಲಿ ದಕ್ಷಿಣ ಕೊರಿಯಾವನ್ನು ಸೋಲಿಸಿ ಕಂಚಿನ ಪದಕ ಗೆದ್ದಿದ್ದಾರೆ.

ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ಕಂಚಿನ ಪದಕ ಗೆದ್ದಿರುವ ಮನು-ಸರಬ್ಜೋತ್ ಸಿಂಗ್​​ಗೆ ಪ್ರಧಾನಿ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಡಬಲ್ಸ್​​​​ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ @realmanubhaker ಮತ್ತು ಸರಬ್ಜೋತ್ ಸಿಂಗ್ ಅವರಿಗೆ ಅಭಿನಂದನೆಗಳು. ಇಬ್ಬರೂ ಉತ್ತಮ ಕೌಶಲ ಮತ್ತು ಟೀಮ್​ವರ್ಕ್​​​ ತೋರಿದ್ದಾರೆ. ನಮ್ಮ ಶೂಟರ್​ಗಳು ಭಾರತವನ್ನು ಹೆಮ್ಮೆಪಡಿಸುತ್ತಲೆ ಇದ್ದಾರೆ ಎಂದು ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಈ ಹಿಂದೆ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ಕಂಚಿನ ಪದಕ ಗೆದ್ದಿದ್ದರು. ಇದೀಗ ಏರ್ ಪಿಸ್ತೂಲ್ ಡಬಲ್ಸ್​ ಶೂಟಿಂಗ್ ಸ್ಪರ್ಧೆಯಲ್ಲಿ ಜಯ ಸಾಧಿಸಿ ಎರಡನೇ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.( ಏಜೆನ್ಸೀಸ್​​)