ನವದೆಹಲಿ: ಮಾರಕ ಕೊರೊನಾ ವೈರಸ್ ರಾಷ್ಟ್ರಕ್ಕೂ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದ್ದು, ಜನತೆಯ ಬೆನ್ನಿಗೆ ನಿಂತಿರುವ ಪ್ರಧಾನಿ ನರೇಂದ್ರ ಮೋದಿ ಸೋಂಕು ಕುರಿತಾಗಿ ಅರಿವು ಮೂಡಿಸುವ ನಿರಂತರ ಪ್ರಯತ್ನಕ್ಕೆ ಕೈಹಾಕಿದ್ದಾರೆ.
ನಿನ್ನೆಯಷ್ಟೇ ಕೊರೊನಾ ವೈರಸ್ ಕುರಿತಾಗಿ ಯಾರು ಭಯಪಡುವ ಅಗತ್ಯವಿಲ್ಲ ಎಂದು ಪ್ರಧಾನಿ ಮೋದಿ ಧೈರ್ಯ ತುಂಬಿದ್ದರು. ಇದೀಗ ಮತ್ತೊಮ್ಮೆ ಟ್ವೀಟ್ ಮೂಲಕ ಜನತೆಗೆ ಸಂದೇಶ ರವಾನಿಸಿದ್ದು, ಆದಷ್ಟು ಎಲ್ಲರು ಒಟ್ಟಾಗಿ ಒಂದೆಡೆ ಸೇರುವುದನ್ನು ಕಡೆಗಣಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಬಾರಿಯ ಹೋಳಿ ಹಬ್ಬದಲ್ಲೂ ಪಾಲ್ಗೊಳ್ಳದಿರಲು ಮೋದಿ ನಿರ್ಧರಿಸಿದ್ದಾರೆ.
ವಿಶ್ವಾದ್ಯಂತ ಪರಿಣಿತರು ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಒಟ್ಟಾಗಿ ಒಂದೆಡೆ ಸೇರುವುದನ್ನು ಕಡೆಗಣಿಸಿ ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ನಾನು ಈ ವರ್ಷದ ಹೋಳಿ ಹಬ್ಬದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಈಗಾಗಲೇ ರಾಷ್ಟ್ರದಲ್ಲಿ 6 ಸೋಂಕಿತ ಪ್ರಕರಣಗಳ ಪತ್ತೆಯಾಗಿದ್ದು, ದೇಶಾದ್ಯಂತ ಕಟ್ಟೆಚ್ಚರ ವಹಿಸಿ ವಿದೇಶದಿಂದ ಬರುವವರನ್ನು ತೀವ್ರ ತಪಾಸಣೆ ನಡೆಸಲಾಗುತ್ತಿದೆ. (ಏಜೆನ್ಸೀಸ್)