ನ್ಯೂಸ್

ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಯನ್ನು ಸ್ವಾಗತಿಸಿದ ಪ್ರಧಾನಿ ಮೋದಿ: ಟ್ರಂಪ್ ಶಾಂತಿ ಪ್ರಯತ್ನಗಳ ಬಗ್ಗೆ ಶ್ಲಾಘನೆ| PM Modi

ಇಸ್ರೇಲ್​: ಗಾಜಾದಿಂದ 20 ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಯನ್ನು ಪ್ರಧಾನಿ ನರೇಂದ್ರ ಮೋದಿ (PM Modi) ಸೋಮವಾರ (ಅಕ್ಟೋಬರ್​,13) ಸ್ವಾಗತಿಸಿದ್ದಾರೆ. ಅಲ್ಲದೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ಶಾಂತಿ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಪ್ರಧಾನಿ ಮೋದಿ, ಈ ಕದನ ವಿರಾಮವು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಚಲ ಸಂಕಲ್ಪದಿಂದ ಈಡೇರಿದೆ ಎಂದು ಬಣ್ಣಿಸಿದ್ದಾರೆ.

ಎರಡು ವರ್ಷಗಳಿಗೂ ಹೆಚ್ಚು ಕಾಲ ಸೆರೆಯಲ್ಲಿದ್ದ ಎಲ್ಲಾ ಒತ್ತೆಯಾಳುಗಳ ಬಿಡುಗಡೆಯನ್ನು ನಾವು ಸ್ವಾಗತಿಸುತ್ತೇವೆ. ಇಸ್ರೇಲಿ ಒತ್ತೆಯಾಳು ಸ್ವಾತಂತ್ರ್ಯವು ಕುಟುಂಬಗಳ ಧೈರ್ಯ, ಅಧ್ಯಕ್ಷ ಟ್ರಂಪ್​ರ ಶಾಂತಿ ಪ್ರಯತ್ನಗಳು ಮತ್ತು ಪ್ರಧಾನಿ ನೆತನ್ಯಾಹು ಬಲವಾದ ಸಂಕಲ್ಪಕ್ಕೆ ಸಿಕ್ಕ ಗೌರವವಾಗಿದೆ. ಮಧ್ಯಪ್ರಾಚ್ಯದಲ್ಲಿ ಶಾಂತಿಯನ್ನು ತರಲು ಅಧ್ಯಕ್ಷ ಟ್ರಂಪ್​ರ ಪ್ರಾಮಾಣಿಕ ಪ್ರಯತ್ನಗಳನ್ನು ನಾವು ಬೆಂಬಲಿಸುತ್ತೇವೆ ಎಂದು ಮೋದಿ ಹೇಳಿದ್ದಾರೆ.

ಹೊಸ ಮಧ್ಯಪ್ರಾಚ್ಯದ ಐತಿಹಾಸಿಕ ಉದಯ: ಟ್ರಂಪ್​

ಈ ಬಗ್ಗೆ ಇಸ್ರೇಲ್​ ಸಂಸತ್ತಿನಲ್ಲಿ ಮಾತನನಾಡಿದ ಟ್ರಂಪ್​, ಗಾಜಾ ಯುದ್ಧದಲ್ಲಿ ಮಧ್ಯವರ್ತಿಯಾಗಿ ಸಹಾಯ ಮಾಡಿದ ಕದನ ವಿರಾಮವು ಹೊಸ ಮಧ್ಯಪ್ರಾಚ್ಯದ ಐತಿಹಾಸಿಕ ಉದಯವನ್ನು ಗುರುತಿಸಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

ಇಸ್ರೇಲ್​- ಹಮಾಸ್​ ಹಲವು ವರ್ಷಗಳಿಂದ ನಡೆಯುತ್ತಿರುವ ನಿರಂತರ ಯುದ್ಧ ಮತ್ತು ಅಂತ್ಯವಿಲ್ಲದ ಹತ್ಯಕಾಂಡವು ಇಂದು ಶಾಂತವಾಗಿದೆ. ಅಲ್ಲದೆ, ಬಂದೂಕುಗಳು ಮೌನವಾಗಿವೆ, ಸೈರನ್‌ಗಳು ಮೋಳಗುವುದು ನಿಂತಿದೆ ಮತ್ತು ಸೂರ್ಯ ಅಂತಿಮವಾಗಿ ಶಾಂತಿಯುತವಾಗಿರುವ ಪವಿತ್ರ ಭೂಮಿಯಲ್ಲಿ ಉದಯಿಸುತ್ತಾನೆ ಎಂದು ಟ್ರಂಪ್​ ಶ್ಲಾಘಿಸಿದ್ದಾರೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್‌ಗೆ ಭೇಟಿ ನೀಡಿ ಸೋಮವಾರ ನೆಸ್ಸೆಟ್ ಅನ್ನು ಉದ್ದೇಶಿಸಿ ಮಾತನಾಡಿದರು, ಅಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ನೆಸ್ಸೆಟ್ ಸ್ಪೀಕರ್ ಅಮೀರ್ ಒಹಾನಾ ಮತ್ತು ವಿರೋಧ ಪಕ್ಷದ ನಾಯಕ ಯೈರ್ ಲ್ಯಾಪಿಡ್ ಕೂಡ ಹೇಳಿಕೆಗಳನ್ನು ನೀಡಿದರು.

ಗಾಜಾ ಒಪ್ಪಂದ ಇಸ್ರೇಲ್ ಮತ್ತು ಜಗತ್ತಿಗೆ ಅದ್ಭುತ ಜಯ: ಟ್ರಂಪ್

ಗಾಜಾದಲ್ಲಿ ಕದನ ವಿರಾಮವನ್ನು ಖಚಿತಪಡಿಸಿಕೊಳ್ಳಲು ಮತ್ತು ಹಮಾಸ್ ಹಿಡಿದಿದ್ದ ಒತ್ತೆಯಾಳುಗಳ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾದ ಒಪ್ಪಂದವನ್ನು ಟ್ರಂಪ್ ಶ್ಲಾಘಿಸಿದರು.

ಹಮಾಸ್ ಒತ್ತೆಯಾಳುಗಳನ್ನು ಮುಕ್ತಗೊಳಿಸಿ ಅವರನ್ನು ಮನೆಗೆ ಕಳುಹಿಸುವಂತೆ ಒತ್ತಡ ಹೇರಲು ಒಗ್ಗೂಡಿದ ಅರಬ್ ಮತ್ತು ಮುಸ್ಲಿಂ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೂ ನನ್ನ ಅಪಾರ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದು ಟ್ರಂಪ್ ಇಸ್ರೇಲ್ ಸಂಸತ್ತಿನಲ್ಲಿ ತಿಳಿಸಿದ್ದಾರೆ.

ನಮಗೆ ಸಾಕಷ್ಟು ಸಹಾಯ ಸಿಕ್ಕಿತು. ನೀವು ಅನುಮಾನಿಸದಷ್ಟು ಜನರಿಂದ ನಮಗೆ ಸಾಕಷ್ಟು ಸಹಾಯ ಸಿಕ್ಕಿದೆ ಮತ್ತು ಇದಕ್ಕಾಗಿ ನಾನು ತುಂಬಾ ಧನ್ಯವಾದ ಹೇಳಲು ಬಯಸುತ್ತೇನೆ. ಈ ಎಲ್ಲಾ ರಾಷ್ಟ್ರಗಳು ಶಾಂತಿಯುತವಾಗಿ ಪಾಲುದಾರರಾಗಿ ಒಟ್ಟಾಗಿ ಕೆಲಸ ಮಾಡುತ್ತಿರುವುದು ಇಸ್ರೇಲ್ ಮತ್ತು ಜಗತ್ತಿಗೆ ಒಂದು ಅದ್ಭುತ ವಿಜಯವಾಗಿದೆ. (ಏಜೆನ್ಸೀಸ್)