ನ್ಯೂಸ್

ಹೋಮ್​ ಮೇಡ್​ ಮಾಸ್ಕ್​ ಧರಿಸಿಕೊಂಡು ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿರುವ ಪ್ರಧಾನಿ ಮೋದಿ; ಏನಾಗಲಿದೆ ಲಾಕ್​ಡೌನ್​?

ನವದೆಹಲಿ: ಕರೊನಾ ವೈರಸ್​ ನಿಯಂತ್ರಣಕ್ಕಾಗಿ 21ದಿನಗಳ ಲಾಕ್​ಡೌನ್ ಘೋಷಣೆ ಮಾಡಲಾಗಿತ್ತು. ಏ.14ರಂದು ಅದು ಮುಕ್ತಾಯವಾಗಲಿದೆ. ಆದರೆ ದಿನೇದಿನೆ ಏರುತ್ತಿರುವ ಕರೊನಾ ಸೋಂಕಿತರ ಸಂಖ್ಯೆ ನೋಡಿದರೆ ಲಾಕ್​ಡೌನ್​ ಮುಂದುವರಿಯುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.

ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸುತ್ತಿದ್ದು, ಕೆಲವೇ ಹೊತ್ತಲ್ಲಿ ಲಾಕ್​ಡೌನ್​ ಮುಂದುವರಿಯಲಿದೆಯಾ? ಕರೊನಾ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮುಂದಿನ ಕ್ರಮವೇನು ಎಂಬುದು ತಿಳಿಯಲಿದೆ. ಒಡಿಶಾ ಮತ್ತು ಪಂಜಾಬ್​ಗಳು ಈಗಾಗಲೇ ಲಾಕ್​ಡೌನ್​ ಅವಧಿಯನ್ನು ಏಪ್ರಿಲ್​ 30ರವರೆಗೆ ವಿಸ್ತರಿಸಿಕೊಂಡಿವೆ. ಹಾಗೇ ಬಹುತೇಕ ರಾಜ್ಯಗಳೂ ಸಹ ಲಾಕ್​ಡೌನ್​ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿವೆ.

ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್​ ಮೂಲಕ ಸಿಎಂಗಳ ಸಭೆ ಪ್ರಾರಂಭ ಮಾಡಿದ್ದಾರೆ. ನರೇಂದ್ರ ಮೋದಿಯವರು ಮನೆಯಲ್ಲಿ ತಯಾರಿಸಿದ ಮಾಸ್ಕ್​ ಧರಿಸಿಕೊಂಡು ಮೀಟಿಂಗ್​ನಲ್ಲಿ ಪಾಲ್ಗೊಂಡಿದ್ದು, ಆ ಫೋಟೋ ವೈರಲ್​ ಆಗಿದೆ.

ಕರೊನಾ ಬಗ್ಗೆ ನರೇಂದ್ರ ಮೋದಿಯವರು ಈಗಾಗಲೇ ಹಲವು ಬಾರಿ ಅರಿವು ಮೂಡಿಸಿದ್ದಾರೆ. ಮಾಸ್ಕ್​ ಧರಿಸಿಕೊಂಡೇ ಹೊರಗೆ ಹೋಗಿ, ಮನೆಯಲ್ಲಿ ಇರುವಾಗಲೂ ಮಾಸ್ಕ್ ಧರಿಸಿಯೇ ಇರಿ ಎಂಬ ಸಂದೇಶವನ್ನು ದೇಶದ ಜನರಿಗೆ ನೀಡಿದ್ದಾರೆ. ಈಗ ಅದನ್ನು ಸ್ವತಃ ಅವರು ಪಾಲಿಸುತ್ತಿದ್ದಾರೆ. ಮುಖ್ಯಮಂತ್ರಿಗಳೊಂದಿಗಿನ ಸಭೆಯಲ್ಲೂ ಮಾಸ್ಕ್​ ಧರಿಸಿಯೇ ಪಾಲ್ಗೊಂಡು ಮಾದರಿಯಾಗಿದ್ದಾರೆ. (ಏಜೆನ್ಸೀಸ್​)