ನ್ಯೂಸ್

ಗುರು ತೇಜ್​ ಬಹದ್ದೂರ್​ 400ನೇ ಜಯಂತಿ: ಗುರುದ್ವಾರ ಸಿಸ್​ ಗಂಜ್​ ಸಾಹಿಬ್​ಗೆ ಪ್ರಧಾನಿ ಮೋದಿ ಭೇಟಿ

ನವದೆಹಲಿ: ಗುರು ತೇಜ್​ ಬಹದ್ದೂರ್​ ಅವರು 400 ನೇ ಜಯಂತೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೆಹಲಿಯ ಗುರುದ್ವಾರ ಸಿಸ್​ ಗಂಜ್​ ಸಾಹಿಬ್​ಗೆ ಭೇಟಿ ನೀಡಿದರು.

400ನೇ ಪ್ರಕಾಶ್​ ಪುರಬ್​ ಹಿನ್ನೆಲೆಯಲ್ಲಿ ಗುರುದ್ವಾರದಲ್ಲಿ ಪ್ರಧಾನಿ ಮೋದಿ ಪ್ರಾರ್ಥನೆ ಸಲ್ಲಿಸಿದರು. ಇದಕ್ಕೂ ಮುನ್ನ ಟ್ವೀಟ್​ ಮಾಡಿರುವ ಮೋದಿ, 400ನೇ ಪ್ರಕಾಶ್​ ಪುರಬ್​ ದಿನದಂದು ನಾನು ಶ್ರೀ ಗುರು ತೇಜ್​ ಬಹದ್ದೂರ್​ಗೆ ತಲೆ ಬಾಗುತ್ತೇನೆ. ಅವರ ಧೈರ್ಯ ಮತ್ತು ದೀನ ದಲಿತರಿಗೆ ಸೇವೆ ಸಲ್ಲಿಸುವ ಗುಣಗಳಿಂದಾಗಿ ಜಾಗತಿಕವಾಗಿ ಅವರನ್ನು ಗೌರವಿಸಲಾಗುತ್ತದೆ. ದಬ್ಬಾಳಿಕೆ ಮತ್ತು ಅನ್ಯಾಯಕ್ಕೆ ತಲೆಬಾಗಲು ಅವರು ನಿರಾಕರಿಸಿದರು ಮತ್ತು ಅವರ ಸರ್ವೋಚ್ಚ ತ್ಯಾಗ ಅನೇಕರಿಗೆ ಶಕ್ತಿ ಮತ್ತು ಪ್ರೇರಣೆ ನೀಡುತ್ತದೆ ಎಂದು ಸ್ಮರಿಸಿದ್ದಾರೆ.

ಗುರುದ್ವಾರ ಸಿಸ್​ ಗಂಜ್​ ಸಾಹಿಬ್​ಗೆ ಭೇಟಿ ನೀಡಿರುವ ಫೋಟೋಗಳನ್ನು ಶೇರ್​ ಮಾಡಿಕೊಂಡಿರುವ ಪ್ರಧಾನಿ ಮೋದಿ, ಶ್ರೀ ಗುರು ತೇಜ್​ ಬಹದ್ದೂರ್ ಜಿ ಅವರ ಜೀವನ, ಆದರ್ಶಗಳು ಮತ್ತು ಸರ್ವೋಚ್ಚ ತ್ಯಾಗವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)