ನವದೆಹಲಿ:ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆರೋಗ್ಯ, ಫಿಟ್ನೆಸ್ ಬಗ್ಗೆ ನಿನ್ನೆ ಮನ್ ಕೀ ಬಾತ್ನಲ್ಲಿ ಕೆಲವರು ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರಿಸಿದ್ದ ನರೇಂದ್ರ ಮೋದಿಯವರು, ನನ್ನ ಫಿಟ್ನೆಸ್ ಬಗ್ಗೆ ಹೇಳಲು ತುಂಬ ವಿಷಯವಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಅಪ್ಲೋಡ್ ಮಾಡುತ್ತೇನೆ. ನೀವದನ್ನು ನಮೋ ಆ್ಯಪ್ನಲ್ಲೂ ನೋಡಬಹುದು ಎಂದು ತಿಳಿಸಿದ್ದರು.
ಮಾತಿನಂತೆ ಪ್ರಧಾನಿ ಮೋದಿ ಇಂದು ಟ್ವಿಟರ್ನಲ್ಲಿ ತಮ್ಮ ಆರೋಗ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಯೋಗಾಭ್ಯಾಸದ ವಿಡಿಯೋವನ್ನು ಪೋಸ್ಟ್ ಮಾಡಿ, ನಿನ್ನೆಯ ಮನ್ ಕೀ ಬಾತ್ನಲ್ಲಿ ಕೆಲವರು ನನ್ನ ಫಿಟ್ನೆಸ್ ಬಗ್ಗೆ ಕೇಳಿದ್ದರು. ಅದರಲ್ಲೂ ಕರೊನಾ ವೈರಸ್ ದಾಳಿಯಿಟ್ಟಿರುವ ಈ ದಿನಗಳಲ್ಲಿ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂದು ಪ್ರಶ್ನಿಸಿದ್ದರು. ಹಾಗಾಗಿ ನಾನು ಈ ಯೋಗದ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದೇನೆ. ನೀವೂ ಕೂಡ ಇನ್ನು ಮುಂದೆ ಪ್ರತಿದಿನ ಯೋಗಾಭ್ಯಾಸ ಮಾಡಿ, ಆರೋಗ್ಯವಂತರಾಗಿರುತ್ತೀರಿ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಯೋಗಾಸನಗಳ ವಿಡಿಯೋಗಳು ಬೇರೆಬೇರೆ ಭಾಷೆಗಳಲ್ಲಿ ಲಭ್ಯವಿದೆ, ನೋಡಿ ಎಂದು ಹೇಳಿರುವ ಪ್ರಧಾನಿ ಮೋದಿ, ನಾನು ಫಿಟ್ನೆಸ್ ತಜ್ಞನಾಗಲೀ, ವೈದ್ಯಕೀಯ ವಿಚಾರಗಳನ್ನು ತುಂಬ ಅರಿತುಕೊಂಡವನಾಗಲೀ ಅಲ್ಲ. ಅದೆಷ್ಟೋ ವರ್ಷಗಳಿಂದ ಯೋಗಾಭ್ಯಾಸ ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ಅದರಿಂದ ನನಗೆ ತುಂಬ ಉಪಯೋಗವಾಗಿದೆ. ನಿಮ್ಮಲ್ಲಿ ಅನೇಕರು ಫಿಟ್ನೆಸ್ ಕಾಪಾಡಿಕೊಳ್ಳಲು ಯೋಗ ಬಿಟ್ಟು ಬೇರೆ ಏನಾದರೂ ಮಾರ್ಗ ಕಂಡುಕೊಂಡಿರಬಹುದು. ಈ ಸಮಯದಲ್ಲಿ ನೀವದನ್ನು ಉಳಿದವರೊಂದಿಗೆ ಹಂಚಿಕೊಳ್ಳಿ ಎಂದು ಪ್ರಧಾನಿ ಸಂದೇಶ ನೀಡಿದ್ದಾರೆ.
ನಿನ್ನೆಯ ಮನ್ ಕೀ ಬಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೊನಾ ವೈರಸ್ ನಿಯಂತ್ರಣದ ವಿಚಾರಗಳನ್ನು ಮಾತನಾಡಿದ್ದರು. ಲಾಕ್ಡೌನ್ನಂತಹ ಕಠಿಣ ಕ್ರಮ ತೆಗೆದುಕೊಂಡಿದ್ದರಿಂದ ನಿಮಗೆಲ್ಲರಿಗೂ ಕಷ್ಟವಾಗಿದೆ ಎಂದು ನನಗೆ ಗೊತ್ತು. ಅದರಲ್ಲೂ ಬಡ ಜನರಿಗೆ ತುಂಬ ತೊಂದರೆಯಾಗಿದೆ. ಅನೇಕರಿಗೆ ನನ್ನ ಮೇಲೆ ಸಿಟ್ಟು ಬಂದಿದೆ. ಆದರೆ ಕರೊನಾ ವಿರುದ್ಧದ ಹೋರಾಟಕ್ಕೆ ಲಾಕ್ಡೌನ್ನಂತಹ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂದು ಹೇಳಿದ್ದ ಅವರು, ದೇಶದ ಜನರಲ್ಲಿ ಕ್ಷಮೆ ಕೂಡ ಯಾಚಿಸಿದ್ದರು.
ಹಾಗೇ ಲಾಕ್ಡೌನ್ ಸಂದರ್ಭದಲ್ಲಿ ಯಾರೂ ಮನೆಯಿಂದ ಹೊರಗೆ ಬರದೆ, ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಒಳ್ಳೆಯ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದರು.(ಏಜೆನ್ಸೀಸ್)