ಬೆಂಗಳೂರು: 2023ರ ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ಏರೋ ಶೋ ಆಯೋಜಿಸಲಾಗಿದ್ದು, ಪ್ರಧಾನಿ ಮೋದಿಯವರು ಚಾಲನೆ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಕಾಲಿನ್ಸ್ ಏರೋಸ್ಪೇಸ್ ಗ್ಲೋಬಲ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸೆಂಟರ್ ಉದ್ಘಾಟಿಸಿ ಮಾತನಾಡಿ, ಈ ಏರೋ ಶೋ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿರುವ ಏರೋಸ್ಪೇಸ್ ಸಂಶೋಧನಾ ಕೇಂದ್ರದ ಬಗ್ಗೆ, ವಿಮಾನಯಾನ, ವಿಮಾನ ಉತ್ಪಾದನಾ ರಂಗಗಳಲ್ಲಿನ ಅವಕಾಶಗಳು ಹಾಗೂ ಸಾಧ್ಯತೆಗಳ ಬಗ್ಗೆ ಬೆಳಕು ಚೆಲ್ಲಬೇಕು ಎಂದರು.
ಭಾರತದ ಎಂಜನೀಯರಗಳ ಸಾಮರ್ಥ್ಯ ಉತ್ತಮವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಭಾಗಗಳನ್ನೂ ಒಳಗೊಂಡ ಸಂಪೂರ್ಣ ವಿಮಾನದ ಉತ್ಪಾದನೆ ಬೆಂಗಳೂರಿನಲ್ಲಿಯೇ ಆಗಬೇಕೆಂಬುದು ನನ್ನ ಕನಸಾಗಿದೆ. ಏರೊಸ್ಪೇಸ್ ಕ್ಷೇತ್ರಕ್ಕೆ ಬೆಂಗಳೂರು ಉತ್ತಮ ಸ್ಥಳ. ಇಲ್ಲಿ ಡಿಆರ್ ಡಿಒ, ಎನ್ಎಎಲ್, ಎಚ್ಎಎಲ್ ನಂತಹ ಸಂಸ್ಥೆಗಳಿವೆ. ಏರೋಸ್ಪೇಸ್, ಕೃತಕ ಬುದ್ಧಿಮತ್ತೆ, ನವೀಕರಿಸಬಹುದಾದ ಇಂಧನ, ಸೆಮಿ ಕಂಡಕ್ಟರ್ ಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರಗಳಿವೆ ಎಂದರು.
ಕೊಲಿನ್ಸ್ ಏರೊಸ್ಪೆಸ್ ಎಂಜನೀಯರಿಂಗ್ ಸಂಸ್ಥೆಯನ್ನು ಆರಂಭಿಸಿದ್ದು ಸಂತಸವಾಗಿದೆ. ಈ ಸಂಸ್ಥೆ ಬೆಂಗಳೂರಿನಲ್ಲಿ 25 ವರ್ಷ ಪೂರೈಸಿದೆ. ಇದು ಸಂಸ್ಥೆಯ ಸಾಧನೆಯನ್ನು ತೋರಿಸುತ್ತದೆ. ಇದು ನಿಮ್ಮ ಶ್ರಮದ ಫಲ. ಬೆಂಗಳೂರು, ಕರ್ನಾಟಕ, ಭಾರತ ಹೆಮ್ಮೆ ಪಡುವಂತೆ ಸಂಸ್ಥೆ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ಕಾಲಿನ್ಸ್ ಸಂಸ್ಥೆಯ ಅಧ್ಯಕ್ಷ ಸ್ಟೀಫನ್ ಟಿಮ್ಸ್ , ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣಾ ಮತ್ತಿತರರು ಉಪಸ್ಥಿತರಿದ್ದರು.