ನವದೆಹಲಿ: ದೇಶದ ವಿವಿಧೆಡೆ ನಡೆಯುತ್ತಿರುವ ಲಸಿಕೆ ಅಭಿವೃದ್ಧಿ ಪ್ರಕ್ರಿಯೆಯನ್ನು ಪರೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆಗೆ ಇಂದು ಭೇಟಿ ನೀಡಲಿದ್ದಾರೆ.
ಬೆಳಗ್ಗೆ 9.30ರ ಸುಮಾರಿಗೆ ಅಹಮದಾಬಾದ್ಗೆ ಬಂದಿಳಿದ ಪ್ರಧಾನಿ ಮೋದಿ ಸದ್ಯ ಚಂಗೋದೋರ್ ಪಾರ್ಕ್ನಲ್ಲಿರುವ ಜೈಡುಸ್ ಕ್ಯಾಡಿಲಾದ ಜೈಕೋವಿ-ಡ್ ಲಸಿಕೆಯ ಪ್ರಗತಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ಇದಾದ ಬಳಿಕ ಮಧ್ಯಾಹ್ನ 1:30ಕ್ಕೆ ಹೈದರಾಬಾದ್ ತಲುಪಿ, ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಯನ್ನು ಪರಿಶೀಲನೆ ನಡೆಸಲಿದ್ದಾರೆ. ನಂತರ ಸಂಜೆ 4:30ರ ಸುಮಾರಿಗೆ ಪುಣೆಯ ಸೆರಂ ಇನ್ಸ್ಟಿಟ್ಯೂಟ್ಗೆ ಭೇಟಿ ನೀಡಿ ಆಸ್ಟ್ರಾಜೆನಿಕಾದ ಲಸಿಕೆಯ ಪ್ರಯೋಗಗಳು ಹಾಗೂ ಉತ್ಪಾದನೆಯನ್ನು ಪರಿಶೀಲಿಸಲಿದ್ದಾರೆ.
ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ವಿಶ್ವದಲ್ಲೇ ಅತಿ ಹೆಚ್ಚು ಲಸಿಕೆಗಳನ್ನು ಉತ್ಪಾದಿಸುವ ಖ್ಯಾತಿ ಪಡೆದಿದೆ. ಯುಕೆ ಮೂಲದ ಅಸ್ಟ್ರಾಜೆನೆಕಾ ಕಂಪನಿ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಕೋವಿಡ್-19 ಲಸಿಕೆ ತಯಾರಿಸಿದೆ.
ಭಾರತ್ ಬಯೋಟೆಕ್ ಕಂಪನಿಯು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಹಭಾಗಿತ್ವದಲ್ಲಿ ಪುಣೆ ಮೂಲದ ಐಸಿಎಂಆರ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ)ನಿಂದ ಪ್ರತ್ಯೇಕಿಸಲ್ಪಟ್ಟ ವೈರಸ್ ಕಣಗಳನ್ನು ಬಳಸಿ ದೇಶ ನಿರ್ಮಿತ ಕೋವಿಡ್-19 ಲಸಿಕೆ ಸಿದ್ಧಪಡಿಸಿದೆ. (ಏಜೆನ್ಸೀಸ್)