ನ್ಯೂಸ್

ಪ್ರ​ಧಾನಿ ಮೋದಿಗೆ ಕೆಂಪುಹಾಸಿನ ಸ್ವಾಗತ: ಫ್ರಾನ್ಸ್​ ಅಧ್ಯಕ್ಷ ಮ್ಯಾಕ್ರನ್​ ಜತೆ ದ್ವಿಪಕ್ಷೀಯ ಸಭೆ; ರಫೇಲ್​, ಸಬ್​ಮರೀನ್​ ಒಪ್ಪಂದಕ್ಕೆ ಇಂದು ಅಂಕಿತ

ಪ್ಯಾರಿಸ್: ಎರಡು ದಿನಗಳ ಭೇಟಿಗಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್​ಗೆ ಗುರುವಾರ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಂಪುಹಾಸಿನ ಸ್ವಾಗತ ನೀಡಲಾಯಿತು. ಶುಕ್ರವಾರ ಅವರು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಜತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ರಫೇಲ್ ಯುದ್ಧ ವಿಮಾನ ಖರೀದಿ, ಜಲಾಂತರ್ಗಾಮಿ ನಿರ್ಮಾಣ ಸಹಿತ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ.

ಈ ಭೇಟಿಯು ರಕ್ಷಣೆ, ಸಾಂಸ್ಕೃತಿಕ, ವೈಜ್ಞಾನಿಕ, ಶೈಕ್ಷಣಿಕ ಮತ್ತು ಆರ್ಥಿಕ ರಂಗಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಮಹತ್ವದ ಹೆಜ್ಜೆ ಎಂದೇ ಪರಿಗಣಿಸಲಾಗಿದೆ. ಚೀನಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲೂ ಇದು ಪ್ರಮುಖವಾಗಿದೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಆಯೋಜಿಸಲಿರುವ ಔತಣ ಕೂಟದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ಸಂಜೆ ಭಾರತೀಯ ಸಮುದಾಯದವರನ್ನು ಅವರು ಭೇಟಿ ಮಾಡಲಿದ್ದಾರೆ. ನಂತರ ಫ್ರೆಂಚ್ ಸಂಸತ್ ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷರು, ಸದಸ್ಯರು, ಫ್ರೆಂಚ್ ಕಂಪನಿಗಳ ಸಿಇಒಗಳನ್ನು ಪ್ರಧಾನಿ ಭೇಟಿಯಾಗಲಿದ್ದಾರೆ.

ಭವ್ಯ ಸ್ವಾಗತ: ಫ್ರಾನ್ಸ್ ಪ್ರಧಾನಿ ಎಲಿಸಬೆತ್ ಬೋರ್ನ್ ಅವರು ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯನ್ನು ಬರಮಾಡಿಕೊಂಡರು. ಸರ್ಕಾರಿ ಗೌರವದೊಂದಿಗೆ ಸ್ವಾಗತ ನೀಡಲಾಯಿತು. ‘ಪ್ಯಾರಿಸ್​ಗೆ ಬಂದಿಳಿದಿದ್ದೇನೆ. ಈ ಭೇಟಿಯ ಸಮಯದಲ್ಲಿ ಭಾರತ-ಫ್ರಾನ್ಸ್ ಸಹಕಾರವನ್ನು ಹೆಚ್ಚಿಸಲು ಎದುರು ನೋಡುತ್ತಿದ್ದೇನೆ. ಭಾರತೀಯ ಸಮುದಾಯದೊಂದಿಗೂ ಸಂವಾದ ನಡೆಸಲಿದ್ದೇನೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಭಾರತೀಯ ಸಮುದಾಯದ ಸದಸ್ಯರು ಪ್ರಧಾನಿ ಆಗಮಿಸುತ್ತಿದ್ದಂತೆ ‘ಭಾರತ್ ಮಾತಾ ಕಿ ಜೈ’ ಎಂದು ಘೊಷಣೆಗಳನ್ನು ಕೂಗಿದರು. ಭಾರತೀಯ ಮೂಲದ ವಲಸಿಗರು ಮತ್ತು ಮಕ್ಕಳ ಜತೆ ಪ್ರಧಾನಿ ಕೆಲಕಾಲ ಕಳೆದರು.

ದೀರ್ಘಾವಧಿಯ ಪಾಲುದಾರಿಕೆ: ನಾನು ಅಧ್ಯಕ್ಷ ಮ್ಯಾಕ್ರಾನ್ ಅವರನ್ನು ಭೇಟಿ ಮಾಡಲು ಎದುರು ನೋಡುತ್ತಿದ್ದೇನೆ. ಮುಂದಿನ 25 ವರ್ಷಗಳಲ್ಲಿ ದೀರ್ಘಾವಧಿಯ ಪಾಲುದಾರಿಕೆಯನ್ನು ಮುಂದಕ್ಕೆ ಕೊಂಡೊಯ್ಯುವ ಬಗ್ಗೆ ಚರ್ಚೆಗಳನ್ನು ನಡೆಸಲಾಗುವುದು. ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಎರಡೂ ದೇಶಗಳು ರಕ್ಷಣೆ, ಬಾಹ್ಯಾಕಾಶ, ನಾಗರಿಕ ಪರಮಾಣು, ಆರ್ಥಿಕತೆ, ವ್ಯಾಪಾರ, ಹೂಡಿಕೆ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿಕಟ ಸಂಬಂಧ ಹೊಂದಿವೆ’ ಎಂದು ಮೋದಿ ತಿಳಿಸಿದ್ದಾರೆ.

ಕಾಯಂ ಸದಸ್ಯತ್ವ ನಮ್ಮ ಹಕ್ಕು

ನವದೆಹಲಿ: ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ದೇಶವಾದ ಭಾರತ ತನ್ನ ‘ನ್ಯಾಯಯುತ ಸ್ಥಾನವನ್ನು ಪಡೆಯುವುದು ಅಗತ್ಯ’ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ (ಯುಎನ್​ಎಸ್​ಸಿ) ಕಾಯಂ ಸದಸ್ಯತ್ವದ ಹಕ್ಕನ್ನು ಬಲವಾಗಿ ಪ್ರತಿಪಾದಿಸಿದ್ದಾರೆ.

‘ಇದು ಕೇವಲ ವಿಶ್ವಾಸಾರ್ಹತೆಯ ಪ್ರಶ್ನೆಯಲ್ಲ. ಅದಕ್ಕಿಂತಲೂ ಹೆಚ್ಚಿನದು. ಅತ್ಯಂತ ಹೆಚ್ಚು ಜನಸಂಖ್ಯೆಯ ಹಾಗೂ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಸದಸ್ಯ ದೇಶವು ಕಾಯಂ ಸದಸ್ಯ ವಾಗಿರದೆ ಭದ್ರತಾ ಮಂಡಳಿಯು ಹೇಗೆ ಜಗತ್ತಿನ ದನಿಯಾಗಬಲ್ಲದು?’ ಎಂದು ಫ್ರೆಂಚ್ ಪತ್ರಿಕೆ ‘ಲೆಸ್ ಇಥೋಸ್’ಗೆ ನೀಡಿರುವ ಸಂದರ್ಶನದಲ್ಲಿ ಮೋದಿ ಪ್ರಶ್ನಿಸಿದ್ದಾರೆ. ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಗೆ ಅನುಗುಣವಾಗಿರದ ಯುಎನ್​ಎಸ್​ಸಿ, ಸಂಸ್ಥೆಯೊಂದರ ವಿರೋಧಾಭಾಸದ ದೃಷ್ಟಾಂತದಂತಿದೆ ಎಂದು ಒಟ್ಟಾರೆಯಾಗಿ ಅಪರೂಪದ್ದೆನಿಸಿದ ಸಂದರ್ಶನದಲ್ಲಿ ಪ್ರಧಾನಿ ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯತ್ವದಲ್ಲಿನ ಅಸಮಾನತೆಯಿಂದಾಗಿ ಈ ಮಹತ್ವದ ಸಂಸ್ಥೆಯ ನೀತಿನಿರ್ಧಾರ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು ಅಸಾಧ್ಯವಾಗುತ್ತದೆ. ಇಂದಿನ ಸವಾಲುಗಳನ್ನು ಎದುರಿಸುವಲ್ಲಿ ಸಂಸ್ಥೆಯ ಅಸಹಾಯಕತೆಯನ್ನು ಅದು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಮೋದಿ ಹೇಳಿದರು.

ಭಾರತ ವಹಿಸಬೇಕಾದ ಪಾತ್ರದ ಸಹಿತ ಭದ್ರತಾ ಮಂಡಳಿಯಲ್ಲಿ ಆಗಬೇಕಾದ ಬದಲಾವಣೆಗಳು ಏನೆಂಬುದರ ಬಗ್ಗೆ ಬಹುತೇಕ ದೇಶಗಳಿಗೆ ಸ್ಪಷ್ಟ ಅರಿವಿದೆ. ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯೆಲ್ ಮಾಕ್ರನ್ ಕೂಡ ಈ ಅಭಿಪ್ರಾಯಕ್ಕೆ ಸಹಮತ ಹೊಂದಿದ್ದಾರೆ ಎಂದು ಮೋದಿ ಹೇಳಿದರು. ಫ್ರಾನ್ಸ್ ಪ್ರವಾಸಕ್ಕೆ ತೆರಳು ಮುನ್ನ ದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಫ್ರೆಂಚ್ ಮಾಧ್ಯಮದೊಂದಿಗೆ ಮಾತನಾಡಿದ ಮೋದಿ ಜಾಗತಿಕವಾಗಿ ಭಾರತ ನಿರ್ವಹಿಸಬೇಕಾಗಿರುವ ಪಾತ್ರದ ಕುರಿತು ವಿವರಿಸಿದರು.

ಯುದ್ಧ ನಮ್ಮ ಶಕ್ತಿಯಲ್ಲ: ಭಾರತದ ಸೌಮ್ಯ ಧೋರಣೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೋದಿ, ಯುದ್ಧ ನಮ್ಮ ಶಕ್ತಿಯಲ್ಲ ಎಂದು ಹೇಳಿದರು. ಯೋಗ, ಆಯುರ್ವೆದ, ಆಧ್ಯಾತ್ಮಿಕತೆ, ವಿಜ್ಞಾನ, ಗಣಿತ ಮತ್ತು ಖಗೋಳಶಾಸ್ತ್ರ ನಮ್ಮ ದೇಶದ ಶಕ್ತಿಯಾಗಿದೆ. ಭಾರತ ಸದಾ ಜಾಗತಿಕ ಶಾಂತಿ ಮತ್ತು ಪ್ರಗತಿಗೆ ಕೊಡುಗೆ ನೀಡುತ್ತಾ ಬಂದಿದೆ ಎಂದರು. ಅಮೆರಿಕದೊಂದಿಗೆ ಬೆಳೆಯುತ್ತಿರುವ ಭಾರತದ ಪಾಲುದಾರಿಕೆ ಈ ಶತಮಾನದ ಮಹತ್ವದ ಪಾಲುದಾರಿಕೆಯಾಗಿದೆ ಎಂದು ವಿವರಿಸಿದರು.

ಯುದ್ಧ ನಮ್ಮ ಶಕ್ತಿಯಲ್ಲ: ಭಾರತದ ಸೌಮ್ಯ ಧೋರಣೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೋದಿ, ಯುದ್ಧ ನಮ್ಮ ಶಕ್ತಿಯಲ್ಲ ಎಂದು ಹೇಳಿದರು. ಯೋಗ, ಆಯುರ್ವೆದ, ಆಧ್ಯಾತ್ಮಿಕತೆ, ವಿಜ್ಞಾನ, ಗಣಿತ ಮತ್ತು ಖಗೋಳಶಾಸ್ತ್ರ ನಮ್ಮ ದೇಶದ ಶಕ್ತಿಯಾಗಿದೆ. ಭಾರತ ಸದಾ ಜಾಗತಿಕ ಶಾಂತಿ ಮತ್ತು ಪ್ರಗತಿಗೆ ಕೊಡುಗೆ ನೀಡುತ್ತಾ ಬಂದಿದೆ ಎಂದರು. ಅಮೆರಿಕದೊಂದಿಗೆ ಬೆಳೆಯುತ್ತಿರುವ ಭಾರತದ ಪಾಲುದಾರಿಕೆ ಈ ಶತಮಾನದ ಮಹತ್ವದ ಪಾಲುದಾರಿಕೆಯಾಗಿದೆ ಎಂದು ವಿವರಿಸಿದರು.

ಬಾಸ್ಟಿಲ್ ಡೇ ಪರೇಡ್​ಗೆ ಮುಖ್ಯ ಅತಿಥಿ: ಫ್ರಾನ್ಸ್​ನ ರಾಷ್ಟ್ರೀಯ ದಿನವಾದ ಜುಲೈ 14ರಂದು ಬಾಸ್ಟಿಲ್ ಡೇ ಪರೇಡ್​ನಲ್ಲಿ ಪ್ರಧಾನಿ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಗೌರವಕ್ಕೆ ಪಾತ್ರವಾದ ಎರಡನೇ ಭಾರತೀಯ ಪ್ರಧಾನಿ ಮೋದಿ. 2009ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸಲಾಗಿತ್ತು. ಈ ವರ್ಷದ ಪರೇಡ್​ನಲ್ಲಿ ಪಂಜಾಬ್ ರೆಜಿಮೆಂಟ್​ನ ಸೈನಿಕರು ಭಾಗಿಯಾಗಲಿದ್ದಾರೆ. ರಜಪೂತಾನ ರೈಫಲ್ಸ್​ನ ಬ್ಯಾಂಡ್​ನ ಟ್ಯೂನ್ ಜತೆಗೆ ಅವರು ಪಥಸಂಚಲನ ಮಾಡಲಿದ್ದಾರೆ. ಈ ವೇಳೆ ವಾದ್ಯವೃಂದದ ಸೈನಿಕರು ‘ಸಾರೆ ಜಹಾಂ ಸೇ ಅಚ್ಚಾ...ರಾಗವನ್ನು ನುಡಿಸಲಿದ್ದಾರೆ. ಭಾರತೀಯ ಸೇನೆಯ ಪಂಜಾಬ್ ರೆಜಿಮೆಂಟ್​ನ ಸೈನಿಕರು ಎರಡೂ ವಿಶ್ವ ಯುದ್ಧಗಳಲ್ಲಿ ಯುರೋಪ್​ನ ವಿವಿಧ ಭಾಗಗಳಲ್ಲಿ ಹೋರಾಡಿದರು. 269 ಸದಸ್ಯರ ಭಾರತೀಯ ತುಕಡಿಯು ಪರೇಡ್​ನಲ್ಲಿ ಭಾಗವಹಿಸಲಿದೆ. ಈ ಸಂದರ್ಭದಲ್ಲಿ ಫ್ರೆಂಚ್ ಜೆಟ್​ಗಳೊಂದಿಗೆ ಭಾರತೀಯ ವಾಯುಪಡೆಯ ಮೂರು ರಫೇಲ್ ಫೈಟರ್ ಜೆಟ್​ಗಳು ಹಾರಾಟ ನಡೆಸಲಿವೆ.

ವೈವಿಧ್ಯದೊಂದಿಗೆ ಯಶಸ್ಸು: ‘ಸರಿಸಾಟಿಯಿಲ್ಲದ ಸಾಮಾಜಿಕ ಮತ್ತು ಆರ್ಥಿಕ ವೈವಿಧ್ಯದೊಂದಿಗೆ ಯಶಸ್ಸು ಸಾಧಿಸಿದ್ದೇವೆ. ಪ್ರಜಾಪ್ರಭುತ್ವದಿಂದ ಪ್ರಯೋಜನವಿದೆ ಎನ್ನುವುದನ್ನು ತೋರಿಸುತ್ತದೆ. ವೈವಿಧ್ಯತೆಯ ನಡುವೆಯೂ ಸೌಹಾರ್ದತೆ ಇರಲು ಸಾಧ್ಯವೆನ್ನುವುದನ್ನು ಇದು ಪ್ರದರ್ಶಿಸುತ್ತದೆ’ ಎಂದು ಮೋದಿ ಹೇಳಿದರು. ದಕ್ಷಿಣಾರ್ಧ ಗೋಳ ಮತ್ತು ಪಾಶ್ಚಿಮಾತ್ಯ ಜಗತ್ತಿನ ನಡುವಣ ಸೇತುವೆಯಾಗಿ ಭಾರತದ ಪಾತ್ರವನ್ನು ಮೋದಿ ಒತ್ತಿ ಹೇಳಿದರು. ದಕ್ಷಿಣಾರ್ಧ ಗೋಳದ ಹಕ್ಕುಗಳನ್ನು ದೀರ್ಘ ಕಾಲದಿಂದ ನಿರಾಕರಿಸಲಾಗಿದೆ. ಅದರ ಫಲವಾಗಿ ಆ ಭಾಗದ ದೇಶಗಳಲ್ಲಿ ಆಕ್ರೋಶ ಮಡುಗಟ್ಟಿದೆ ಎಂದು ಹೇಳಿದರು. ದಕ್ಷಿಣಾರ್ಧ ಗೋಳಕ್ಕೆ ಸಂಬಂಧಿಸಿದಂತೆ ಪ್ರಜಾತಂತ್ರದ ಚೈತನ್ಯವನ್ನು ಗೌರವಿಸಲಾಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.