ನ್ಯೂಸ್

ಪ್ರಧಾನಿ ಮೋದಿಗೆ ಹನುಮಗಡಿ ದೇಗುಲದವರಿಂದ ಬೆಳ್ಳಿ ಕಿರೀಟ ಉಡುಗೊರೆ..

ಲಖನೌ: ಅಯೋಧ್ಯೆಯ ಶ್ರೀರಾಮಜನ್ಮಭೂಮಿ ಸ್ಥಳದಲ್ಲಿ ಶ್ರೀರಾಮಮಂದಿರದ ಭೂಮಿಪೂಜೆ, ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಹನುಮಗಡಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಅವರಿಗೆ ಬೆಳ್ಳಿ ಕಿರೀಟ ಉಡುಗೊರೆಯಾಗಿ ನೀಡಲು ದೇಗುಲದ ಆಡಳಿತ ನಿರ್ಧರಿಸಿದೆ.

ಅಯೋಧ್ಯೆಯ ಹನುಮಗಡಿ ದೇವಾಲಯದ ಮುಖ್ಯ ಅರ್ಚಕ ಶ್ರೀ ಗಡ್ಡಿನ್​ಶೀನ್ ಪ್ರೇಮದಾಸ್​ ಜೀ ಮಹಾರಾಜ್ ಈ ವಿಷಯವನ್ನು ಬಹಿರಂಗಪಡಿಸಿದ್ದು,  ಪ್ರಧಾನಿ ನರೇಂದ್ರ ಮೋದಿಯವರು ಇದೇ ವೇಳೆ 3.5 ಕ್ವಿಂಟಾಲ್ ತೂಕದ ಘಂಟೆಯನ್ನು ಭಾರಿಸುವ ನಿರೀಕ್ಷೆಯಲ್ಲಿದ್ದೇವೆ. ಅದಾಗಿ ಅವರು ರಾಮಜನ್ಮಭೂಮಿ ಸ್ಥಳಕ್ಕೆ ತೆರಳಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಯೋಧ್ಯೆ ಆಗಮಿಸುತ್ತಿರುವ ವಿಷಯವೇ ನಮಗೆ ಹೆಮ್ಮೆಯ ಸಂಗತಿ. ದೇಶವನ್ನು ಅನೇಕ ಪ್ರಧಾನ ಮಂತ್ರಿಗಳು ಮುನ್ನಡೆಸಿದ್ದಾರೆ. ಆದರೆ, ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವ ಅವಕಾಶ ಸಿಕ್ಕಿದ್ದು ಮೋದಿಯವರಿಗೆ ಮಾತ್ರವೇ ಅದು ವಿಶೇಷ ಎಂದು ಪ್ರೇಮದಾಸ್ ಜೀ ಮಹಾರಾಜ್ ಹೇಳಿದ್ದಾರೆ. (ಏಜೆನ್ಸೀಸ್)