ನ್ಯೂಸ್

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಉದ್ಘಾಟನೆಯು ಪರಿಶ್ರಮದ ಭಾಗವಾಗಿದೆ: ಪ್ರಧಾನಿ ಮೋದಿ

ಮಂಡ್ಯ: ಕಳೆದ ಕೆಲವು ದಿನಗಳಿಂದ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳು ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಈ ರೀತಿಯ ಎಕ್ಸ್​ಪ್ರೆಸ್​ ವೇ ದೇಶದೆಲ್ಲೆಡೆ ಆಗಲಿ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ಎಕ್ಸ್​ಪ್ರೆಸ್​ ವೇ ಉದ್ಘಾಟಿಸಿದ ಬಳಿಕ ಗೆಜ್ಜಲೆಗೆರೆಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.

ತಾಯಿ ಭುವನೇಶ್ವರಿಗೆ ನನ್ನ ನಮನಗಳು, ಆದಿ ಚುಂಚನಗಿರಿ, ಮೇಲುಕೋಟೆಯ ಗುರುಗಳಿಗೂ ನಮನಗಳು, ಸಕ್ಕರೆ ನಗರ ಮಂಡ್ಯ, ಮಧುರ ಮಂಡ್ಯ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಕಳೆದ ಕೆಲವು ದಿನಗಳಿಂದ ಕರ್ನಾಟಕ ಜನತಾ ಜನಾರ್ದನರ ಭೇಟಿಯ ಅವಕಾಶ ಸಿಗುತ್ತಿದೆ. ಇಲ್ಲಿ ನನಗೆ ಅಭೂತಪೂರ್ವ ಸ್ವಾಗತ ಸಿಗುತ್ತಿದೆ. ನೀವು ನಮಗೆ ನೀಡಿದ ಪ್ರೀತಿಯನ್ನು ಬಡ್ಡಿ ಸಮೇತ ವಾಪಸ್​ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಈ ಹೆದ್ದಾರಿ ಉದ್ಘಾಟನೆಯು ಪರಿಶ್ರಮದ ಭಾಗವಾಗಿದೆ. ಮೈಸೂರು-ಬೆಂಗಳೂರು ನಡುವೆ ಅರ್ಧಕ್ಕಿಂತಹ ಪ್ರಯಾಣ ಅವಧಿ ಕಡಿಮೆಯಾಗಿದೆ. ಮೈಸೂರು-ಕುಶಾಲನಗರ ನಡುವೆಯೂ ಹೆದ್ದಾರಿ ಅಭಿವೃದ್ಧಿ ಆಗಲಿದೆ. ಇದರ ಮೂಲಕ ಸಮೃದ್ಧಿಯ ರಸ್ತೆಯು ತೆರೆದುಕೊಳ್ಳಲಿದೆ. ದೇಶದಲ್ಲಿ ಮೂಲಸೌಕರ್ಯ ಬಗ್ಗೆ ಚರ್ಚೆಯಾದಾಗಲೆಲ್ಲ ಸರ್​. ಎಂ. ವಿಶ್ವೇಶ್ವರಯ್ಯ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್​ ಹೆಸರು ಪ್ರಸ್ತುತ. ಅವರ ಮುಂದಾಲೋಚನೆಯ ಫಲ ಈಗ ಇಲ್ಲಿ ಕಾಣುತ್ತಿದೆ ಎಂದರು.

ದೇಶದಲ್ಲಿ ಭಾರತ್​ ಮಾಲಾ, ಸಾಗರ್​ ಮಾಲಾ ಯೋಜನೆಗಳೂ ಜಾರಿಯಲ್ಲಿವೆ. ಇವುಗಳಿಂದ ಕರ್ನಾಟಕ, ದೇಶದ ಅಭಿವೃದ್ಧಿಗೆ ಸಹಕಾರಿಯಾಗುತ್ತಿದೆ. ಮೂಲಸೌಕರ್ಯ ಅಭಿವೃದ್ಧಿಯಿಂದ ಉದ್ಯೋಗ ಹೆಚ್ಚಳವಾಗುತ್ತದೆ. ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಲ್ಲಿ 1 ಲಕ್ಷ ರೂ. ಕೋಟಿ ಮೂಲಸೌಕರ್ಯಕ್ಕೆ ವ್ಯಯವಾಗಲಿದೆ ಎಂದು ತಿಳಿಸಿದರು.

ಮೈಸೂರು ಮತ್ತು ಬೆಂಗಳೂರು ಪರಂಪರೆ ತಂತ್ರಜ್ಞಾನಕ್ಕೆ ಪ್ರಸಿದ್ಧವಾಗಿದೆ. ಈ ನಗರಗಳನ್ನು ಹೆದ್ದಾರಿ ಮೂಲಕ ಜೋಡಿಸುವುದು ಸಹಕಾರಿಯಾಗಿದೆ. ಭಾರೀ ಟ್ರಾಫಿಕ್​ ಬಗ್ಗೆ ದೂರಲಾಗುತ್ತಿತ್ತು. ಈಗ ಎಕ್ಸ್​ಪ್ರೆಸ್​ ವೇ ಸಿದ್ಧವಾಗಿದೆ. ಹೆದ್ದಾರಿಯ ಕಾರಣದಿಂದ ಪ್ರಯಾಣದ ಅವಧಿ ಕಡಿತಗೊಂಡಿದೆ. ಈ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಕೈಗಾರಿಕೆಗಳ ವಿಸ್ತರಣೆಗೆ ಹೆದ್ದಾರಿ ನೆರವಾಗಲಿದೆ. ಈ ಎಕ್ಸ್​ಪ್ರೆಸ್​ ವೇ ರಾಮನಗರ ಮತ್ತು ಮಂಡ್ಯವನ್ನು ಜೋಡಿಸುತ್ತದೆ ಎಂದರು.

2014ಕ್ಕೂ ಮೊದಲ ಈ ದೇಶದಲ್ಲಿ ಕಾಂಗ್ರೆಸ್​ ಸರ್ಕಾರ ಕೇಂದ್ರದಲ್ಲಿತ್ತು. ಕಾಂಗ್ರೆಸ್​ ಸರ್ಕಾರವೂ ಕೋಟ್ಯಂತರ ರೂಪಾಯಿಯನ್ನು ಲೂಟಿ ಮಾಡಿತ್ತು. ಆ ಸರ್ಕಾರ ಬಡವರ ಬಗ್ಗೆ ಯಾವುದೇ ಕರುಣೆ ಹೊಂದಿರಲಿಲ್ಲ. 2014ರಲ್ಲಿ ನೀವು ನನಗೆ ಸೇವೆಯ ಅವಕಾಶ ನೀಡಿದ್ರಿ. ನಾವು ಬಡವರ ಬಗ್ಗೆ ಸಂವೇದನೆ ಹೊಂದಿದ ಸರ್ಕಾರವನ್ನು ರಚಿಸಿದೆವು. ಬಡವರ ಕಷ್ಟಗಳನ್ನು ಕಡಿಮೆ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಬಿಜೆಪಿ ಸರ್ಕಾರವು ಪೂರ್ಣ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.