ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಏಮ್ಸ್ನಲ್ಲಿ ಗುರುವಾರ ಬೆಳಗ್ಗೆ ಕರೊನಾ ಲಸಿಕೆಯ ಎರಡನೇ ಡೋಸ್ ಪಡೆದರು. ಮಾರ್ಚ್ 1ರಂದು ಮೊದಲ ಡೋಸ್ ಪಡೆದಿದ್ದ ಮೋದಿ ಅವರು 1 ತಿಂಗಳ ಬಳಿಕ ಎರಡನೇ ಡೋಸ್ ಪಡೆದುಕೊಂಡಿದ್ದಾರೆ.
ಲಸಿಕೆ ಪಡೆದ ಬೆನ್ನಲ್ಲೇ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಇಂದು ಏಮ್ಸ್ನಲ್ಲಿ ಕರೊನಾ ಲಸಿಕೆಯ ಎರಡನೇ ಡೋಸ್ ಪಡೆಯಲಾಯಿತು. ವೈರಸ್ ಅನ್ನು ಸೋಲಿಸಲು ನಮ್ಮಲ್ಲಿರುವ ಕೆಲವು ವಿಧಾನಗಳಲ್ಲಿ ಲಸಿಕೆಯು ಒಂದಾಗಿದೆ. ಲಸಿಕೆ ಪಡೆಯಲು ನೀವು ಅರ್ಹರಾಗಿದ್ದರೆ, ಆದಷ್ಟು ಬೇಗ ಲಸಿಕೆ ಪಡೆದುಕೊಳ್ಳಿ. http://CoWin.gov.in ವೆಬ್ಸೈಟ್ನಲ್ಲಿ ನೋಂದಾಯಿಸಿಕೊಳ್ಳಿ ಎಂದು ಪ್ರಧಾನಿ ಕರೆ ನೀಡಿದ್ದಾರೆ.
ಪುದುಚೇರಿಯ ಪಿ. ನಿವೇದ ಮತ್ತು ಪಂಜಾಬ್ನ ನಿಶಾ ಶರ್ಮಾ ಎಂಬ ಇಬ್ಬರು ನರ್ಸ್ಗಳು ಪ್ರಧಾನಿ ಮೋದಿ ಅವರಿಗೆ ಕರೊನಾ ಲಸಿಕೆಯನ್ನು ಹಾಕಿದರು.
ಪ್ರಧಾನಿಗೆ ಲಸಿಕೆ ನೀಡಿದ ಅನುಭವ ಹಂಚಿಕೊಂಡ ನಿಶಾ ಶರ್ಮಾ, ನಾನಿಂದ ನಮ್ಮ ಪ್ರಧಾನಿ ನರೇಂದ್ರ ಮೋದಿಗೆ ಕೋವಾಕ್ಸಿನ್ ಎರಡನೇ ಡೋಸ್ ನೀಡಿದ್ದೇನೆ. ಅವರು ನಮ್ಮೊಂದಿಗೆ ಮಾತನಾಡಿದರು. ನಾನು ಅವರನ್ನು ಭೇಟಿಯಾಗಿದ್ದು ಮತ್ತು ಅವರಿಗೆ ಲಸಿಕೆ ಹಾಕಿದ್ದು ನನಗೆ ಸ್ಮರಣೀಯ ಕ್ಷಣವಾಗಿದೆ ಎಂದಿದ್ದಾರೆ.
ಮಾರ್ಚ್ 1ರಂದು ಕರೊನಾ ಲಸಿಕೆಯ ಮೊದಲ ಡೋಸ್ ಪಡೆದ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ಏಮ್ಸ್ನಲ್ಲಿ ನನ್ನ ಮೊದಲ ಕರೊನಾ ಲಸಿಕೆ ಡೋಸ್ ಪಡೆಯಲಾಯಿತು. ಕೋವಿಡ್-19 ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸಲು ನಮ್ಮ ವೈದ್ಯರು ಮತ್ತು ವಿಜ್ಞಾನಿಗಳು ತ್ವರಿತ ಸಮಯದಲ್ಲಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದು ಗಮನಾರ್ಹವಾಗಿದೆ. ಎಲ್ಲ ಅರ್ಹರು ಕರೊನಾ ಲಸಿಕೆ ಪಡೆಯಬೇಕೆಂದು ನಾನು ಮನವಿ ಮಾಡುತ್ತೇನೆ. ಒಟ್ಟಾಗಿ ನಾವು ಭಾರತವನ್ನು ಕೋವಿಡ್ ಮುಕ್ತವಾಗಿಸೋಣ ಎಂಬ ಸಂದೇಶ ರವಾನಿಸಿದ್ದರು.
ಲಸಿಕೆ ಪಡೆಯಲು ಬಯಸುವವರು ಕೇಂದ್ರ ಸರ್ಕಾರ ಅಭಿವೃದ್ಧಿ ಪಡಿಸಿರುವ ಕೋವಿನ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ. ನೋಂದಣಿ ಪ್ರಕ್ರಿಯೆಗೆ ವೆಬ್ಸೈಟ್ cowin.gov.in ನೋಡಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)