ನ್ಯೂಸ್

ಮೂಡ್​ ಆಫ್​ ದಿ ನೇಷನ್​ ಸಮೀಕ್ಷೆ: ಕುಸಿದ ಎನ್​ಡಿಎ ಖ್ಯಾತಿ, ಮುಂದುವರಿದ ಪ್ರಧಾನಿ ಮೋದಿ ಪ್ರಸಿದ್ಧಿ! PM Modi

PM Modi : ಆಗಸ್ಟ್​ ತಿಂಗಳ ಮೂಡ್​ ಆಫ್​ ದಿ ನೇಷನ್​ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಷಮತೆಯ ರೇಟಿಂಗ್​ನಲ್ಲಿ ಅಲ್ಪ ಮಟ್ಟದ ಕುಸಿತ ಕಂಡುಬಂದಿದೆ. ಆದರೂ ಅವರ ಖ್ಯಾತಿಗೆ ಮಾತ್ರ ಯಾವುದೇ ಹಿನ್ನಡೆ ಉಂಟಾಗಿಲ್ಲ.

ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ಸಮೀಕ್ಷೆಯಲ್ಲಿ ಶೇ. 62 ರಷ್ಟು ಮಂದಿ ಮೋದಿ ಅವರ ಕಾರ್ಯಕ್ಷಮತೆ 'ಉತ್ತಮ' ಎಂದು ರೇಟಿಂಗ್ ಮಾಡಿದ್ದರು. ಆದರೆ, ಈಗ ಆ ಅಂಕಿ ಅಂಶವು ಶೇ. 58ಕ್ಕೆ ಇಳಿದಿದೆ. ಕೊಂಚ ಕುಸಿತದ ಹೊರತಾಗಿಯೂ, 11 ವರ್ಷಗಳ ಸುದೀರ್ಘ ಅಧಿಕಾರಾವಧಿಯ ಬಳಿಕ ಪ್ರಧಾನಿ ಮೋದಿಯವರ ಜನಪ್ರಿಯತೆ ಇಂದಿಗೂ ಕಡಿಮೆಯಾಗಿಲ್ಲ ಎಂಬುದನ್ನು ಇದು ತೋರಿಸುತ್ತದೆ.

ಅಂದಹಾಗೆ, ಪ್ರಧಾನಿ ಮೋದಿಯವರು ಪ್ರಸ್ತುತ ಮೂರನೇ ಅವಧಿಯ ಆಡಳಿತವನ್ನು ನಡೆಸುತ್ತಿದ್ದಾರೆ. ಇದುವರೆಗಿನ ಅವರ ಕಾರ್ಯಕ್ಷಮತೆಯನ್ನು ಶೇ. 34.2 ರಷ್ಟು ಜನರು 'ಅತ್ಯುತ್ತಮ' ಎಂದು ಕರೆದರೆ, ಶೇ. 23.8 ರಷ್ಟು ಜನರು 'ಉತ್ತಮ' ಎಂದು ಭಾವಿಸಿದ್ದಾರೆ. ಆದಾಗ್ಯೂ, ಫೆಬ್ರವರಿಯಲ್ಲಿ ನಡೆದ ಹಿಂದಿನ ಮೂಡ್​ ಆಫ್​ ದಿ ನೇಷನ್​ ಸಮೀಕ್ಷೆಯಲ್ಲಿ, ಪ್ರಧಾನಿ ಮೋದಿಯವರ ಕಾರ್ಯಕ್ಷಮತೆಯನ್ನು ಅತ್ಯುತ್ತಮ ಎಂದು ಕರೆದ ಜನರ ಶೇಕಡಾವಾರು ಪ್ರಮಾಣ ಶೇ. 36.1 ರಷ್ಟಿತ್ತು, ಇದು ಈ ಬಾರಿ ಇಳಿಕೆಯ ಪ್ರವೃತ್ತಿಯನ್ನು ಸೂಚಿಸುತ್ತದೆ.

ಪ್ರಧಾನಿ ಮೋದಿಯವರ ಕಾರ್ಯಕ್ಷಮತೆಯನ್ನು ಸರಾಸರಿ ಎಂದು ಸುಮಾರು ಶೇ. 12.7 ರಷ್ಟು ಜನರು ಕರೆದರೆ, ಶೇ. 12.6 ಮತ್ತು ಶೇ. 13.8 ರಷ್ಟು ಜನರು ಕ್ರಮವಾಗಿ 'ಕಳಪೆ' ಮತ್ತು 'ತುಂಬಾ ಕಳಪೆ' ಎಂದು ಕರೆದಿದ್ದಾರೆ.

ಇನ್ನು ಸಮೀಕ್ಷೆಯ ಪ್ರಕಾರ, ಎನ್‌ಡಿಎ ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಗಮನಾರ್ಹವಾಗಿ ಕುಸಿದಿದೆ. ಫೆಬ್ರವರಿ 2025 ರಲ್ಲಿ ಶೇ. 62.1 ರಷ್ಟು ಜನರು ಎನ್​ಡಿಎ ಕಾರ್ಯಕ್ಷಮತೆಯನ್ನು 'ಉತ್ತಮ' ಎಂದು ರೇಟಿಂಗ್ ಮಾಡಿದ್ದರು. ಆದರೆ ಇತ್ತೀಚಿನ ಸಮೀಕ್ಷೆಯಲ್ಲಿ ಈ ಅಂಕಿ ಅಂಶವು ಶೇ. 52.4 ಕ್ಕೆ ಇಳಿದಿದೆ. ಶೇ. 15.3 ರಷ್ಟು ಜನರು ಎನ್​ಡಿಎ ಅಧಿಕಾರದಿಂದ ತೃಪ್ತರಾಗಿಲ್ಲ. ಇದು ಫೆಬ್ರವರಿಯಲ್ಲಿ ಶೇ. 8.6 ರಷ್ಟು ಇತ್ತು. ದತ್ತಾಂಶದ ಪ್ರಕಾರ, ಶೇ. 2.7 ರಷ್ಟು ಜನರು ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ, ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ (MOTN) ಸಮೀಕ್ಷೆಯನ್ನು ಜುಲೈ 1 ಮತ್ತು ಆಗಸ್ಟ್ 14, 2025 ರ ನಡುವೆ ನಡೆಸಲಾಗಿದೆ. ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ 54,788 ವ್ಯಕ್ತಿಗಳ ಮೇಲೆ ಸಮೀಕ್ಷೆಯನ್ನು ನಡೆಸಲಾಗಿದೆ. ಸಿವೋಟರ್‌ನ ನಿಯಮಿತ ಟ್ರ್ಯಾಕರ್ ಡೇಟಾದಿಂದ ಹೆಚ್ಚುವರಿಯಾಗಿ 1,52,038 ಸಂದರ್ಶನಗಳನ್ನು ಸಹ ವಿಶ್ಲೇಷಿಸಲಾಗಿದೆ. ಹೀಗಾಗಿ, ಈ MOTN ವರದಿಗಾಗಿ ಒಟ್ಟು 2,06,826 ಪ್ರತಿಸ್ಪಂದಕರ ಅಭಿಪ್ರಾಯವನ್ನು ಪರಿಗಣಿಸಲಾಗಿದೆ. (ಏಜೆನ್ಸೀಸ್​)