ನ್ಯೂಸ್

PM Modi Manipur Visit | ಮಣಿಪುರ ಸಂಘರ್ಷದಿಂದ ಸ್ಥಳಾಂತರವಾದ ಸಂತ್ರಸ್ತರನ್ನು ಭೇಟಿಯಾದ ಪ್ರಧಾನಿ ಮೋದಿ!

PM Modi Manipur Visit: ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ನಡೆದು ಎರಡು ವರ್ಷಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಿಂಸಾಚಾರದ ಕೇಂದ್ರಬಿಂದುವಾಗಿದ್ದ ಚುರಾಚಂದ್‌ಪುರದಿಂದ ವಲಸೆ ಹೋದ ಜನರನ್ನು ಭೇಟಿ ಮಾಡಿದರು.

ಭಾರೀ ಮಳೆಯಿಂದಾಗಿ ಇಂಫಾಲ ವಿಮಾನ ನಿಲ್ದಾಣದಿಂದ 65 ಕಿ.ಮೀ ರಸ್ತೆ ಪ್ರಯಾಣ ಕೈಗೊಂಡ ಪ್ರಧಾನಿ, ಚುರಚಂದ್‌ಪುರದ ಪೀಸ್ ಗ್ರೌಂಡ್‌ನಲ್ಲಿರುವ ಪರಿಹಾರ ಶಿಬಿರಗಳಲ್ಲಿ ವೃದ್ಧರು ಮತ್ತು ಮಕ್ಕಳೊಂದಿಗೆ ಸಂವಾದ ನಡೆಸಿದರು. ಅವರೊಂದಿಗೆ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಕೂಡ ಉಪಸ್ಥಿತರಿದ್ದರು.

ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಮೈತೈಗಳ ಬೇಡಿಕೆಯ ವಿರುದ್ಧ ಬುಡಕಟ್ಟು ಗುಂಪಿನೊಂದು ನಡೆಸಿದ ರ‍್ಯಾಲಿಯಲ್ಲಿ ಮೊದಲು ಹಿಂಸಾಚಾರ ಭುಗಿಲೆದ್ದಿತು. ಚುರಚಂದ್‌ಪುರದಲ್ಲಿ, ಪ್ರಧಾನಿ ಮೋದಿ, 7,300 ಕೋಟಿ ರೂಪಾಯಿ ಮೌಲ್ಯದ 14 ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ, ಇದರಲ್ಲಿ ಒಳಚರಂಡಿ ಸೌಲಭ್ಯಗಳು, ಮಹಿಳಾ ಹಾಸ್ಟೆಲ್‌ಗಳು, ಶಾಲೆಗಳು ಮತ್ತು ಸೂಪರ್-ಸ್ಪೆಷಾಲಿಟಿ ಆರೋಗ್ಯ ಸೌಲಭ್ಯಗಳು ಸೇರಿವೆ. ಮೇ 3, 2023 ರಂದು ಭುಗಿಲೆದ್ದ ಮೈಟೈ ಮತ್ತು ಕುಕಿ-ಝೋ ಜನರ ನಡುವಿನ ಘರ್ಷಣೆಯಲ್ಲಿ ನೂರಾರು ಜನರು ಗಾಯಗೊಂಡಿದ್ದಾರೆ ಮತ್ತು 60,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಎರಡು ವರ್ಷಗಳಲ್ಲಿ, ಹಿಂಸಾಚಾರ ಹಂತ ಹಂತವಾಗಿ ಹೆಚ್ಚಾಗುತಿದ್ದರಿಂದ, ಅಂತಿಮವಾಗಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು, ಫೆಬ್ರವರಿ 13 ರಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ.

ಪ್ರಧಾನಿ ಮೋದಿ ಚುರಚಂದ್‌ಪುರದ ನಂತರ ಮೈತೆಯಿಗಳು ಹೆಚ್ಚಾಗಿರುವ ಇಂಫಾಲ್​​ಗೆ ಭೇಟಿ ನೀಡಿ, ಸಂಘರ್ಷದಿಂದ ಸ್ಥಳಾಂತರಗೊಂಡ ಜನರನ್ನು ಭೇಟಿ ಮಾಡಲಿದ್ದಾರೆ. ನಗರದಾದ್ಯಂತ ಸಾವಿರಾರು ಕುಕಿಗಳನ್ನು ಪರಿಹಾರ ಶಿಬಿರಗಳಲ್ಲಿ ಇರಿಸಲಾಗಿದೆ. ಕುಕಿ-ಝೋ ಗುಂಪುಗಳು ಬಹುಸಂಖ್ಯಾತರಾಗಿರುವ ಬೆಟ್ಟದ ಜಿಲ್ಲೆಗಳನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕೆಂದು ಒತ್ತಾಯಿಸಿವೆ. ಪ್ರಧಾನಿ ಮೋದಿ, ಇಂಪಾಲ್​​ನಲ್ಲಿ 1,200 ಕೋಟಿ ರೂ.ಗಳ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಐತಿಹಾಸಿಕ ಕಾಂಗ್ಲಾ ಕೋಟೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕಾಂಗ್ಲಾ ಕೋಟೆಯು ಹಿಂದಿನ ಮಣಿಪುರ ಸಾಮ್ರಾಜ್ಯದ ಅಧಿಕಾರ ಕೇಂದ್ರವಾಗಿತ್ತು.

ಪ್ರತಿಪಕ್ಷಗಳ ಟೀಕೆ..

ಹಿಂಸಾಚಾರ ಭುಗಿಲೆದ್ದ ಎರಡು ವರ್ಷಗಳ ನಂತರ, ಗಲಭೆಪೀಡಿತ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿಯನ್ನು ಪ್ರತಿಪಕ್ಷಗಳು ತೀವ್ರವಾಗಿ ಟೀಕಿಸಿದ್ದು, ಇದನ್ನು ಪ್ರಹಸನ ಎಂದು ಕರೆದಿವೆ.

ಈ ವಿಷಯವಾಗಿ ಮಾತನಾಡಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಮಣಿಪುರ ಬಹಳ ಸಮಯದಿಂದ ಉರಿಯುತ್ತಿದೆ,  ಪ್ರಧಾನಿಯ ಈಗಿನ ಭೇಟಿ ದೊಡ್ಡ ವಿಷಯವೇನಲ್ಲ ಎಂದು ಹೇಳಿದರು. ಇದಕ್ಕೆ ಧ್ವನಿಗೂಡಿಸಿರುವ ಕಾಂಗ್ರೆಸ್​​ ನಾಯಕ ಜೈರಾಮ್​ ರಮೇಶ್​​, ಪ್ರಧಾನಿಯವರ ಮೂರು ಗಂಟೆಗಳ ಭೇಟಿ ಸುಮಾರು 29 ತಿಂಗಳುಗಳಿಂದ ಅವರ ಗಮನಕ್ಕಾಗಿ ಕಾಯುತ್ತಿದ್ದ ರಾಜ್ಯದ ಜನರಿಗೆ ಮಾಡಿದ ಅವಮಾನವಾಗಿದೆ, ಈ ಭೇಟಿ ಶಾಂತಿ ಮತ್ತು ಸೌಹಾರ್ದತೆಗೆ ಬಲ ನೀಡುವ ಬದಲು ವಾಸ್ತವವಾಗಿ ಒಂದು ಪ್ರಹಸನವಾಗಲಿದೆ ಎಂದಿದ್ದಾರೆ.(ಏಜೆನ್ಸೀಸ್​​​)