ಮುಂಬೈ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಜುಲೈ13) ರಂದು ವಾಣಿಜ್ಯ ನಗರಿ ಮುಂಬೈನಲ್ಲಿ ರಸ್ತೆ, ರೈಲ್ವೆ, ಬಂದರು ವಲಯಗಳಲ್ಲಿ ಸುಮಾರು 29,400 ಕೋಟಿಗು ಅಧಿಕ ಅಬಿವೃದ್ಧಿ ಯೋಜನೆಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.
ಮುಂಬೈನ ಗೋರೆಗಾಂವ್‌ನ ನೆಸ್ಕೋ ಪ್ರದರ್ಶನ ಕೇಂದ್ರದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಅವರು ಪ್ರಧಾನಿ ಮೋದಿ ಅವರನ್ನು ಸನ್ಮಾನಿಸಿದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಗೆದ್ದು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನರೇಂದ್ರ ಮೋದಿ ಅವರು ಮುಂಬೈಗೆ ನೀಡಿದ ಮೊದಲ ಭೇಟಿ ಇದಾಗಿದೆ.
ಈ ವೇಳೆ ಪ್ರತಿಕ್ರಿಯಿಸಿರುವ ಮೋದಿ, ಮಹಾರಾಷ್ಟ್ರವನ್ನು ವಿಶ್ವದ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಮತ್ತು ಮುಂಬೈಯನ್ನು ಜಾಗತಿಕ ಫಿನ್ಟೆಕ್ ರಾಜಧಾನಿಯನ್ನಾಗಿ ಮಾಡುವುದು ನನ್ನ ಗುರಿ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಗೋರೆಗಾಂವ್ ಮುಲುಂಡ್ ಲಿಂಕ್ ರಸ್ತೆ (ಜಿಎಂಎಲ್‌ಆರ್) ಯೋಜನೆಯಲ್ಲಿ ಸುಮಾರು 6,300 ಕೋಟಿ ರೂ.ಗಳ ಅವಳಿ ಸುರಂಗ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಥಾಣೆ-ಬೊರಿವಲಿ ಸುರಂಗ ಮಾರ್ಗದ ಯೋಜನೆ ಹಾಗೂ 6300 ಕೋಟಿ ರೂ. ಗೋರೆಗಾಂವ್ ಮುಲುಂಡ್ ಲಿಂಕ್ ರೋಡ್ ಸುರಂಗ ಯೋಜನೆ ಒಳಗೊಂಡಿದೆ.
ಲೋಕಮಾನ್ಯ ತಿಲಕ್ ಟರ್ಮಿನಸ್ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಲ್ದಾಣದಲ್ಲಿ ಹೊಸ ಪ್ಲಾಟ್‌ಫಾರ್ಮ್ ಅನ್ನು ಪ್ರಧಾನಿ ಮೋದಿ ರಾಷ್ಟ್ರಕ್ಕೆ ಸರ್ಪಿಸಿದರು. 5,600 ಕೋಟಿ ರೂ. ಮೌಲ್ಯದ ಮುಖ್ಯಮಂತ್ರಿ ಯುವ ಕಾರ್ಯ ಪ್ರಶಿಕ್ಷಣ ಯೋಜನೆಗೂ ಪ್ರಧಾನಿ ಮೋದಿ ಅವರು ಚಾಲನೆ ನೀಡಿದರು. 18 ರಿಂದ 30 ವರ್ಷ ವಯಸ್ಸಿನ ಯುವಕರಿಗೆ ಕೌಶಲ್ಯ ವರ್ಧನೆ ಮತ್ತು ಉದ್ಯಮದ ಮಾನ್ಯತೆಗೆ ಅವಕಾಶಗಳನ್ನು ಒದಗಿಸುವ ಮೂಲಕ ಯುವ ನಿರುದ್ಯೋಗವನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.