ನ್ಯೂಸ್

ಅನಂತ್​ ಅಂಬಾನಿ ಅವರ ವನ್ಯಜೀವಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ಉದ್ಘಾಟಿಸಿದ ಪ್ರಧಾನಿ ಮೋದಿ! Vantara

Vantara: ಗುಜರಾತಿನ ಜಾಮ್​ ನಗರದಲ್ಲಿ ಭಾರತದ ಶ್ರೀಮಂತ ಉದ್ಯಮಿ ಮುಕೇಶ್​ ಅಂಬಾನಿ ಅವರ ಪುತ್ರ ಅನಂತ್​ ಅಂಬಾನಿ ಅವರು ನಿರ್ಮಿಸಿರುವ ವಿಶ್ವದ ಅತಿ ದೊಡ್ಡ ಮೃಗಾಲಯ, ಪ್ರಾಣಿ ಸಂರಕ್ಷಣಾ ಹಾಗೂ ಪುನರ್ವಸತಿ ಕೇಂದ್ರ (ವಂತಾರಾ) ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಫೆ.04) ಉದ್ಘಾಟಿಸಿದರು.

ವಂತಾರಾವು 2,000ಕ್ಕೂ ಹೆಚ್ಚು ಜಾತಿಯ ಪ್ರಾಣಿಗಳಿಗೆ ಮತ್ತು 1.5 ಲಕ್ಷಕ್ಕೂ ಹೆಚ್ಚು ರಕ್ಷಿಸಲ್ಪಟ್ಟ, ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿರುವ ಪ್ರಾಣಿಗಳಿಗೆ ನೆಲೆಯಾಗಿದೆ. ಉದ್ಘಾಟನೆಯ ಬಳಿಕ ಪ್ರಧಾನಿ ಮೋದಿ ಅವರು ಕೇಂದ್ರದಲ್ಲಿನ ವಿವಿಧ ಸೌಲಭ್ಯಗಳನ್ನು ಪರಿಶೀಲಿಸಿದರು. ಅಲ್ಲದೆ, ವಂತಾರಾದಲ್ಲಿ ಪುನರ್ವಸತಿ ಕಲ್ಪಿಸಲಾದ ವಿವಿಧ ಜಾತಿಯ ಪ್ರಾಣಿಗಳೊಂದಿಗೆ ಅವರು ನಿಕಟವಾಗಿ ಸಂವಹನ ನಡೆಸಿದರು.

ವಂತಾರಾದಲ್ಲಿರುವ ವನ್ಯಜೀವಿ ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನಿ, ಎಂಆರ್‌ಐ, ಸಿಟಿ ಸ್ಕ್ಯಾನ್‌ಗಳು, ಐಸಿಯುಗಳು ಸೇರಿದಂತೆ ಪಶುವೈದ್ಯಕೀಯ ಸೌಲಭ್ಯಗಳನ್ನು ವೀಕ್ಷಿಸಿದರು. ವನ್ಯಜೀವಿ ಅರಿವಳಿಕೆ, ಹೃದಯಶಾಸ್ತ್ರ, ಮೂತ್ರಪಿಂಡಶಾಸ್ತ್ರ, ಎಂಡೋಸ್ಕೋಪಿ, ದಂತವೈದ್ಯಶಾಸ್ತ್ರ, ಆಂತರಿಕ ಔಷಧ ಇತ್ಯಾದಿಗಳನ್ನು ಹೊಂದಿರುವ ಅನೇಕ ವಿಭಾಗಗಳನ್ನು ಸಹ ವೀಕ್ಷಿಸಿದರು. ಇಲ್ಲಿ ಅವರು ಏಷ್ಯಾಟಿಕ್ ಸಿಂಹದ ಮರಿಗಳು, ಬಿಳಿ ಸಿಂಹದ ಮರಿ, ಚಿರತೆ ಮರಿ, ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿ ಜಾತಿಗಳು, ಕ್ಯಾರಕಲ್ ಮರಿ ಸೇರಿದಂತೆ ವಿವಿಧ ಪ್ರಾಣಿಗಳೊಂದಿಗೆ ಆಟವಾಡಿದರು ಮತ್ತು ಆಹಾರ ನೀಡಿದರು. ಪ್ರಧಾನಿ ಮೋದಿ ಅವರು ಆಹಾರ ನೀಡಿದ ಬಿಳಿ ಸಿಂಹದ ಮರಿ ತನ್ನ ತಾಯಿಯನ್ನು ರಕ್ಷಿಸಿ, ಆರೈಕೆಗಾಗಿ ವಂತಾರಾಕ್ಕೆ ಕರೆತಂದ ನಂತರ ಇಲ್ಲಿ ಜನಿಸಿತು. ಭಾರತದಲ್ಲಿ ಒಂದು ಕಾಲದಲ್ಲಿ ಹೇರಳವಾಗಿದ್ದ ಕ್ಯಾರಕಲ್‌ಗಳು ಈಗ ಅಪರೂಪದ ದೃಶ್ಯವಾಗುತ್ತಿವೆ.

ವಂತಾರಾದಲ್ಲಿ, ಕ್ಯಾರಕಲ್‌ಗಳನ್ನು ಅವುಗಳ ಸಂರಕ್ಷಣೆಗಾಗಿ ಸೆರೆಯಲ್ಲಿ ಸಂತಾನೋತ್ಪತ್ತಿ ಕಾರ್ಯಕ್ರಮದಡಿಯಲ್ಲಿ ಸಾಕಲಾಗುತ್ತದೆ ಮತ್ತು ನಂತರ ಕಾಡಿಗೆ ಬಿಡಲಾಗುತ್ತದೆ. ಪ್ರಧಾನ ಮಂತ್ರಿ ಅವರು ಆಸ್ಪತ್ರೆಯ ಎಂಆರ್‌ಐ ಕೋಣೆಗೆ ಭೇಟಿ ನೀಡಿದರು ಮತ್ತು ಏಷಿಯಾಟಿಕ್ ಸಿಂಹಕ್ಕೆ ಎಂಆರ್‌ಐ ಮಾಡಿಸಿಕೊಳ್ಳುವುದನ್ನು ವೀಕ್ಷಿಸಿದರು. ಈ ಕೇಂದ್ರದಲ್ಲಿ ಹೊರಗಡೆ ರಕ್ಷಿಸಲಾದ ಪ್ರಾಣಿಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನವನ್ನು ನಿಕಟವಾಗಿ ಪ್ರತಿಬಿಂಬಿಸುವ ಸ್ಥಳಗಳಲ್ಲಿ ಇರಿಸಿ, ಸಂರಕ್ಷಣೆ ಮಾಡಲಾಗುತ್ತಿದೆ.

ಕೇಂದ್ರದಲ್ಲಿ ಕೈಗೊಂಡ ಕೆಲವು ಪ್ರಮುಖ ಸಂರಕ್ಷಣಾ ಉಪಕ್ರಮಗಳಲ್ಲಿ ಏಷಿಯಾಟಿಕ್ ಸಿಂಹ, ಹಿಮ ಚಿರತೆ, ಒಂದು ಕೊಂಬಿನ ಘೇಂಡಾಮೃಗ, ಇತರವು ಸೇರಿವೆ. ಪ್ರಧಾನ ಮಂತ್ರಿ ಅವರು ವಿವಿಧ ಕ್ರೂರ ಪ್ರಾಣಿಗಳ ಬಳಿಯೂ ಹೋಗಿ ಅವುಗಳನ್ನು ಸಂತೈಸಿದರು. ಅವರು ಗೋಲ್ಡನ್ ಟೈಗರ್‌ನೊಂದಿಗೆ ಮುಖಾಮುಖಿಯಾಗಿ ಕುಳಿತುಕೊಂಡರು.

ಒರಾಂಗುಟನ್‌ಗಳೊಂದಿಗೆ ಪ್ರೀತಿಯಿಂದ ಆಟವಾಡಿದರು. ನೀರಿನ ಅಡಿಯಲ್ಲಿರುವ ಹಿಪಪಾಟಮಸ್ ಅನ್ನು ಹತ್ತಿರದಿಂದ ನೋಡಿದರು. ಮೊಸಳೆಗಳನ್ನು ನೋಡಿದರು. ಜೀಬ್ರಾಗಳ ನಡುವೆ ನಡೆದಾಡಿದರು. ಜಿರಾಫೆ ಮತ್ತು ಘೇಂಡಾಮೃಗದ ಮರಿಗೆ ಆಹಾರವನ್ನು ನೀಡಿದರು.

ಜಲಚಿಕಿತ್ಸಾ ಕೊಳಗಳು ಸಂಧಿವಾತ ಮತ್ತು ಕಾಲು ಸಮಸ್ಯೆಗಳಿಂದ ಬಳಲುತ್ತಿರುವ ಆನೆಗಳ ಚೇತರಿಕೆಗೆ ಸಹಾಯ ಮಾಡುತ್ತವೆ ಮತ್ತು ಅವುಗಳ ಚಲನಶೀಲತೆಯನ್ನು ಸುಧಾರಿಸುತ್ತವೆ. ವಿಶ್ವದ ಅತಿದೊಡ್ಡ ಆಸ್ಪತ್ರೆಯಾಗಿರುವ ಆನೆ ಆಸ್ಪತ್ರೆಯ ಕಾರ್ಯನಿರ್ವಹಣೆಯನ್ನು ಅವರು ನೋಡಿದರು. ಕೇಂದ್ರದಲ್ಲಿ ರಕ್ಷಿಸಲಾದ ಗಿಳಿಗಳನ್ನು ಅವರು ಬಿಡುಗಡೆ ಮಾಡಿದರು. ಕೇಂದ್ರದಲ್ಲಿ ವಿವಿಧ ಸೌಲಭ್ಯಗಳನ್ನು ನಿರ್ವಹಿಸುತ್ತಿರುವ ವೈದ್ಯರು, ಸಹಾಯಕ ಸಿಬ್ಬಂದಿ ಮತ್ತು ಕಾರ್ಮಿಕರೊಂದಿಗೆ ಪ್ರಧಾನಿ ಸಂವಾದ ನಡೆಸಿದರು.

ಏನಿದು ವಂತಾರಾ?

ರಿಲಯನ್ಸ್​ ಇಂಡಸ್ಟ್ರೀಸ್​ ನಿರ್ದೇಶಕ ಅನಂತ್​ ಅಂಬಾನಿ ಅವರು ವಿಶ್ವದ ಅತಿ ದೊಡ್ಡ ಮೃಗಾಲಯ, ಪ್ರಾಣಿ ಸಂರಕ್ಷಣಾ ಹಾಗೂ ಪುನರ್ವಸತಿ ಕೇಂದ್ರವನ್ನು ತೆರೆಯುವ ತಮ್ಮ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್​ ಅನ್ನು 2024ರ ಫೆ.26ರಂದು ಘೋಷಣೆ ಮಾಡಿದರು. ಈ ಪ್ರಾಜೆಕ್ಟ್​ ಹೆಸರು ವಂತಾರಾ. ಇದರ ಅರ್ಥ ಕಾಡಿನ ನಕ್ಷತ್ರ. ಪ್ರಾಣಿಗಳ ರಕ್ಷಣೆ, ಚಿಕಿತ್ಸೆ, ಪೋಷಣೆ ಮತ್ತು ಗಾಯಗೊಂಡ ಪ್ರಾಣಿಗಳ ಪುನರ್ವಸತಿ, ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆ ಈ ಯೋಜನೆಯ ಪ್ರಮುಖ ಗುರಿಯಾಗಿದ್ದು, ದೇಶ ಮತ್ತು ವಿದೇಶ ಎರಡರಲ್ಲೂ ಕಾರ್ಯನಿರ್ವಹಿಸಲಿದೆ. ಗುಜರಾತಿನ ರಿಲಯನ್ಸ್​ನ ಜಾಮ್‌ನಗರ ರಿಫೈನರಿ ಕಾಂಪ್ಲೆಕ್ಸ್‌ನ ಗ್ರೀನ್ ಬೆಲ್ಟ್‌ನಲ್ಲಿ 3000 ಎಕರೆಗಳಷ್ಟು ವಿಶಾಲ ಪ್ರದೇಶವಿದ್ದು, ವಂತಾರಾ ಕಾರ್ಯಕ್ರಮದ ಅಡಿಯಲ್ಲಿ ಈ ಜಾಗವನ್ನು ಕಾಡಿನಂತಹ ಪರಿಸರಕ್ಕೆ ಪರಿವರ್ತಿಸಲಾಗಿದೆ.

ಸಂರಕ್ಷಿಸಲ್ಪಟ್ಟ ಪ್ರಾಣಿಗಳ ಪಾಲನೆಗಾಗಿ ನೈಸರ್ಗಿಕ, ಸಮೃದ್ಧ ಮತ್ತು ಹಸಿರು ಆವಾಸಸ್ಥಾನವನ್ನು ಹೊಂದಿದೆ. ಜಾಗತಿಕವಾಗಿ ಪ್ರಾಣಿ ಸಂರಕ್ಷಣಾ ಪ್ರಯತ್ನಗಳಿಗೆ ಪ್ರಮುಖ ಕೊಡುಗೆ ನೀಡುವವರಲ್ಲಿ ಮೂಂಚೂಣಿ ಸ್ಥಾನದಲ್ಲಿ ನಿಲ್ಲುವ ಗುರಿಯನ್ನು ವಂತಾರಾ ಗುರಿ ಹೊಂದಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ವಂತಾರಾ ಪ್ರಾಜೆಕ್ಟ್​ ಗುಜರಾತಿನ ಜಾಮ್‌ನಗರದಲ್ಲಿ ರಿಲಯನ್ಸ್‌ನ ನವೀಕರಿಸಬಹುದಾದ ಇಂಧನ ವ್ಯವಹಾರವನ್ನು ಮುನ್ನಡೆಸುತ್ತಿರುವ ರಿಲಯನ್ಸ್​ ಇಂಡಸ್ಟ್ರಿ ಲಿಮಿಟೆಡ್​ ಮತ್ತು ರಿಲಯನ್ಸ್ ಫೌಂಡೇಶನ್ ಮಂಡಳಿಗಳ ನಿರ್ದೇಶಕರಾದ ಅನಂತ್​ ಅಂಬಾನಿ ಅವರ ಪರಿಕಲ್ಪನೆಯಾಗಿದೆ ಮತ್ತು ಕನಸಿನ ಯೋಜನೆಯೂ ಆಗಿದೆ.