ನ್ಯೂಸ್

ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ನಳಂದದಲ್ಲಿ ನೂತನ ಕ್ಯಾಂಪಸ್​ ಉದ್ಘಾಟನೆ; ಪ್ರಧಾನಿ ಮೋದಿ ಹೇಳಿದ್ದೇನು ಗೊತ್ತಾ?

ಪಾಟ್ನಾ: ಬಿಹಾರದ ರಾಜ್‌ಗಿರ್‌ನಲ್ಲಿರುವ ಐತಿಹಾಸಿಕ ನಳಂದ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್‌ನ್ನು ಪ್ರಧಾನಿ ಮೋದಿ ಬುಧವಾರ (ಜೂನ್​​ 19) ಉದ್ಘಾಟಿಸಿದರು. ಬೆಳಗ್ಗೆ ನಳಂದಾ ವಿಶ್ವವಿದ್ಯಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿ ಮೊದಲು ವಿಶ್ವವಿದ್ಯಾಲಯದ ಹಳೆಯ ಪರಂಪರೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದರು. ಇದಾದ ಬಳಿಕ ಹೊಸ ಕ್ಯಾಂಪಸ್‌ಗೆ ಆಗಮಿಸಿದ ಅವರು ಬೋಧಿ ವೃಕ್ಷವನ್ನು ನೆಟ್ಟು ನೂತನ ಕ್ಯಾಂಪಸ್‌ ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿ ಅರ್ಲೇಕರ್, ಮುಖ್ಯಮಂತ್ರಿ ನಿತೀಶ್ ಕುಮಾರ್, ವಿದೇಶಾಂಗ ಸಚಿವ ಎಸ್​​.ಜೈಶಂಕರ್ ಸೇರಿದಂತೆ ಸುಮಾರು 17 ರಾಷ್ಟ್ರಗಳ ರಾಯಭಾರಿಗಳು ಉಪಸ್ಥಿತರಿದ್ದರು.

ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮಾತ್ರವಲ್ಲದೆ ವಿಶ್ವದ ಹಲವು ದೇಶಗಳ ಪರಂಪರೆಯು ನಳಂದ ಜತೆಗೆ ಸಂಬಂಧ ಹೊಂದಿದೆ. ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ಮೊದಲ 10 ದಿನಗಳಲ್ಲಿ ನಳಂದಾಗೆ ಭೇಟಿ ನೀಡುವ ಅವಕಾಶ ಸಿಕ್ಕಿದೆ. ಇದನ್ನು ನಾನು ಭಾರತದ ಅಭಿವೃದ್ಧಿ ಪಯಣದ ಶುಭ ಸಂಕೇತವಾಗಿ ನೋಡುತ್ತೇನೆ ಎಂದರು.

ನಳಂದ ಒಂದು ಗುರುತು, ಗೌರವ, ಹೆಮ್ಮೆ ಎಂದು ಹೇಳಿದ ಅವರು, ಪುಸ್ತಕಗಳು ಬೆಂಕಿಯ ಜ್ವಾಲೆಯಲ್ಲಿ ಸುಡಬಹುದು, ಆದರೆ ಬೆಂಕಿಯ ಜ್ವಾಲೆಯು ಜ್ಞಾನವನ್ನು ನಾಶಮಾಡುವುದಿಲ್ಲ ಎಂಬ ಸತ್ಯದ ಘೋಷಣೆಯೇ ನಳಂದ ಎಂದು ಹೇಳಿದರು. ಈ ಹೊಸ ಕ್ಯಾಂಪಸ್ ವಿಶ್ವಕ್ಕೆ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಬಲವಾದ ಮಾನವೀಯ ಮೌಲ್ಯಗಳ ಮೇಲೆ ನಿಂತಿರುವ ರಾಷ್ಟ್ರಗಳು ರಾಷ್ಟ್ರೀಯ ಇತಿಹಾಸವನ್ನು ಪುನರುಜ್ಜೀವನಗೊಳಿಸುವ ಮೂಲಕ ಉತ್ತಮ ಭವಿಷ್ಯದ ಅಡಿಪಾಯವನ್ನು ಹೇಗೆ ಹಾಕಬೇಕೆಂದು ತಿಳಿದಿವೆ ಎಂದು ನಳಂದ ತೋರಿಸುತ್ತದೆ ಎಂದಿದ್ದಾರೆ.

ಪ್ರಾಚೀನ ನಳಂದದಲ್ಲಿ ಮಕ್ಕಳ ಪ್ರವೇಶವನ್ನು ಅವರ ಗುರುತು ಅಥವಾ ರಾಷ್ಟ್ರೀಯತೆಯ ಆಧಾರದ ಮೇಲೆ ಮಾಡಲಾಗಿಲ್ಲ. ಪ್ರತಿ ದೇಶ ಮತ್ತು ಪ್ರತಿಯೊಂದು ವರ್ಗದ ಯುವಕರು ಇಲ್ಲಿಗೆ ಬರುತ್ತಿದ್ದರು. ನಳಂದ ವಿಶ್ವವಿದ್ಯಾನಿಲಯದ ಈ ಹೊಸ ಕ್ಯಾಂಪಸ್‌ನಲ್ಲಿ ನಾವು ಅದೇ ಪ್ರಾಚೀನ ವ್ಯವಸ್ಥೆಯನ್ನು ಮತ್ತೆ ಬಲಪಡಿಸಬೇಕಾಗಿದೆ. ಪ್ರಪಂಚದ ಹಲವು ದೇಶಗಳ ವಿದ್ಯಾರ್ಥಿಗಳು ಇಲ್ಲಿಗೆ ಬರಲಾರಂಭಿಸಿದ್ದಾರೆ. ನಳಂದದಲ್ಲಿ 20ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಸುಧೈವ ಕುಟುಂಬಕಂ ಚೈತನ್ಯದ ಸುಂದರ ಪ್ರತೀಕ ಎಂದು ತಿಳಿಸಿದರು. (ಏಜೆನ್ಸೀಸ್​​)