ನ್ಯೂಸ್

ಜಾರ್ಖಂಡ್​ನಲ್ಲಿ 83,700 ಕೋಟಿ ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ!

ರಾಂಚಿ: ಜಾರ್ಖಂಡ್​ನಲ್ಲಿ ಸುಮಾರು 83,700 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಬುಧವಾರ) ಚಾಲನೆ ನೀಡಿದ್ದಾರೆ

ಜಾರ್ಖಾಂಡ್​ನ ಹಜಾರಿಬಾಗ್​ನಲ್ಲಿ 79,150 ಕೋಟಿ ವೆಚ್ಚದಲ್ಲಿ 'ಧರ್ತಿ ಆಬಾ ಜನಜಾತಿಯ ಗ್ರಾಮ ಉತ್ಕರ್ಷ್ ಅಭಿಯಾನ'ಕ್ಕೆ ಪ್ರಧಾನಿ ಚಾಲನೆ ನೀಡಿದ್ದಾರೆ. ಆ ಮೂಲಕ ದೇಶದಾದ್ಯಂತ ಬುಡಕಟ್ಟು ಸಮುದಾಯಗಳ ಸಮಗ್ರ ಅಭಿವೃದ್ಧಿಯನ್ನು ಖಾತ್ರಿಪಡಿಸುವ ಉದ್ದೇಶ ಹೊಂದಲಾಗಿದೆ.

ಈ ಯೋಜನೆಯು 30 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ 549 ಜಿಲ್ಲೆಗಳ ಐದು ಕೋಟಿಗೂ ಹೆಚ್ಚು ಬುಡಕಟ್ಟು ಜನಾಂಗದವರಿಗೆ ಪ್ರಯೋಜನ ಸಿಗಲಿದೆ. ಈ ಯೋಜನೆಯು ಭಗವಾನ್ ಬಿರ್ಸಾ ಮುಂಡಾ ಭೂಮಿಯಿಂದ ಪ್ರಾರಂಭವಾಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ.” ಎಂದು ಮೋದಿ ಹೇಳಿದ್ದಾರೆ.

‘1,360 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಪ್ರಧಾನಿಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನಕ್ಕೂ (PM-JANMAN) ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಇವುಗಳಲ್ಲಿ 1,380 ಕಿ.ಮೀ.ಗೂ ಹೆಚ್ಚು ರಸ್ತೆಗಳ ನಿರ್ಮಾಣ, 120 ಅಂಗನವಾಡಿ ಕೇಂದ್ರಗಳು, 250 ಬಹು ಉದ್ದೇಶದ ಕೇಂದ್ರಗಳು ಮತ್ತು 10 ಶಾಲಾ ಹಾಸ್ಟೆಲ್‌ಗಳು ಸೇರಿವೆ.

“ಬುಡಕಟ್ಟು ಜನಾಂಗದ ಯುವಕರಿಗೆ ಉತ್ತಮ ಶಿಕ್ಷಣದ ಅವಕಾಶ ಸಿಕ್ಕಾಗ ನಮ್ಮ ಬುಡಕಟ್ಟು ಸಮುದಾಯವು ಪ್ರಗತಿ ಹೊಂದುತ್ತದೆ. ಇದಕ್ಕಾಗಿ ನಮ್ಮ ಸರ್ಕಾರವು ಬುಡಕಟ್ಟು ಪ್ರದೇಶಗಳಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ನಿರ್ಮಿಸಲು ಶ್ರಮಿಸುತ್ತಿದೆ. 40 ಏಕಲವ್ಯ ಮಾದರಿ ವಸತಿ ಶಾಲೆಗಳನ್ನು (ಇಎಂಆರ್‌ಎಸ್) ಉದ್ಘಾಟಿಸಲಾಗುತ್ತಿದೆ. 25 ಇಎಂಆರ್‌ಎಸ್‌ಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ.” ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

“ಪ್ರಧಾನಿ ಆವಾಸ್ ಯೋಜನೆ ಅಡಿಯಲ್ಲಿ ಜಾರ್ಖಂಡ್‌ನ ಸಾವಿರಾರು ಬಡವರು ತಮ್ಮದೇ ಆದ ಪಕ್ಕಾ ಮನೆಯನ್ನು ಪಡೆದುಕೊಂಡಿದ್ದಾರೆ. ಇದೀಗ, ಜಾರ್ಖಂಡ್‌ನಲ್ಲಿ ಇಂದು 80 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಾಗಿದೆ. ಈ ಯೋಜನೆಗಳು ಬುಡಕಟ್ಟು ಸಮಾಜದ ಕಲ್ಯಾಣ ಮತ್ತು ಉನ್ನತಿಗೆ ಸಂಬಂಧಿಸಿದೆ” ಎಂದು ಮೋದಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.