ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಡಿ.ಕೆ. ಶಿವಕುಮಾರ್ಗೆ(DK Shivakumar) ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನೂತನ ಮುಖ್ಯಮಂತ್ರಿಗಳಿಗೆ ಶುಭ ಕೋರಿದ್ದು, ರಾಜ್ಯದ ಅಭಿವೃದ್ಧಿಗೆ ಕೈಜೋಡಿಸುವ ಭರವಸೆ ನೀಡಿದ್ದಾರೆ.
ಕೇಂದ್ರದಿಂದ ನಿಕಟ ಸಹಕಾರದ ಭರವಸೆ
ಎಕ್ಸ್ನಲ್ಲಿ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಪೋಸ್ಟ್ ಹಾಕಿದ್ದು, "ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆಗಳು. ಅವರ ಅಧಿಕಾರಾವಧಿಗೆ ಶುಭಾಶಯಗಳು," ಎಂದು ತಿಳಿಸಿದ್ದಾರೆ. ಇದೇ ವೇಳೆ, ಕರ್ನಾಟಕದ ಜನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲಿದೆ ಎಂಬ ಭರವಸೆಯನ್ನು ಪ್ರಧಾನಿ ನೀಡಿದ್ದಾರೆ.
ಜನಪರ ಕೆಲಸಕ್ಕೆ ಕುಮಾರಸ್ವಾಮಿ ಕರೆ
ಮತ್ತೊಂದೆಡೆ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೂ ಕೂಡ ನೂತನ ಮುಖ್ಯಮಂತ್ರಿಗಳಿಗೆ ಶುಭ ಹಾರೈಸಿದ್ದಾರೆ. "ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿರುವ ಡಿ.ಕೆ. ಶಿವಕುಮಾರ್ಗೆ ಅಭಿನಂದನೆಗಳು. ತಮಗೆ ದೊರೆತಿರುವ ಈ ಅವಕಾಶವನ್ನು ಜನಪರ ಕೆಲಸಗಳಿಗೆ ಹಾಗೂ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಉಪಯೋಗ ಮಾಡಿಕೊಳ್ಳಿ ಎಂದು ಆಶಿಸುತ್ತೇನೆ," ಎಂದು ಕುಮಾರಸ್ವಾಮಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ನೆಲ, ಜಲ, ಭಾಷೆ ಕಾಯುವಂತೆ ಆಶಯ
ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಶುಭ ಹಾರೈಸಿರುವ ವಿಜಯೇಂದ್ರ, "ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆಗಳು. ಕರ್ನಾಟಕದ ನೆಲ, ಜಲ, ಭಾಷೆ ಹಾಗೂ ಸಮಗ್ರ ಅಭಿವೃದ್ಧಿಗೆ ನಿಮ್ಮ ಸರಕಾರ ಬದ್ಧವಾಗಿ ಕಾರ್ಯ ನಿರ್ವಹಿಸಲಿ ಎಂದು ಆಶಿಸುವೆ," ಎಂದು ತಿಳಿಸಿದ್ದಾರೆ.
ಎಲ್ಲ ವರ್ಗದ ಹಿತ ಕಾಯಲು ನಿರೀಕ್ಷೆ
ಮುಂದುವರಿದು ಮಾತನಾಡಿದ ಅವರು, "ರಾಜ್ಯದ ರೈತರು, ಕಾರ್ಮಿಕರು, ಬಡವರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲ ವರ್ಗದ ಜನರ ಹಿತ ಕಾಯುವಿರೆಂಬ ನಿರೀಕ್ಷೆ ನಾಡಿನ ಜನರದ್ದಾಗಿದೆ. ತಾರತಮ್ಯವಿಲ್ಲದ ಶುದ್ಧ ಆಡಳಿತ ತತ್ವಕ್ಕೆ ಬದ್ಧರಾಗಿ ನಡೆದುಕೊಳ್ಳುವಿರೆಂದು ಬಯಸುವೆ," ಎಂದಿದ್ದಾರೆ.