ನ್ಯೂಸ್

ಪಕ್ಷಕ್ಕೆ 400 ದಿನಗಳ ಟಾಸ್ಕ್ ನೀಡಿದ ಮೋದಿ; ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ನಿರ್ದೇಶನ

Webdesk - Ravikanth

ನವದೆಹಲಿ: ಇದೇ ವರ್ಷ ನಡೆಯಲಿರುವ 9 ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಮುಂದಿನ ವರ್ಷದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದ್ದ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯು ಪಕ್ಷ ಸಂಘಟನೆ ಹಾಗೂ ಬಲವರ್ಧನೆ ನಿಟ್ಟಿನಲ್ಲಿ ಪ್ರಮುಖ ವಿಚಾರಗಳನ್ನು ರ್ಚಚಿಸಿತು. ದೇಶದ ‘ಅಮೃತ ಕಾಲ’ವನ್ನು (ಸ್ವಾತಂತ್ರ್ಯದ 75ನೇ ವರ್ಷ) ‘ಕರ್ತವ್ಯ ಕಾಲ’ವನ್ನಾಗಿ ಪರಿವರ್ತಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಕಾರ್ಯಕಾರಿಣಿಯಲ್ಲಿ ಸಮಾರೋಪ ಭಾಷಣ ಮಾಡಿದ ಮೋದಿ, ಮುಂದಿನ 400 ದಿನಗಳಲ್ಲಿ ಮತದಾರರ ಹಿತಾಸಕ್ತಿ ಕಾಪಾಡುವತ್ತ ಕೆಲಸ ಮಾಡಬೇಕು. ಬಿಜೆಪಿ ಕೇವಲ ರಾಜಕೀಯ ಆಂದೋಲನವಾಗಿ ಉಳಿಯಬೇಕಿಲ್ಲ. ಬದಲಿಗೆ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸುವ ಸಾಮಾಜಿಕ ಆಂದೋಲನವಾಗಿ (ರಾಜನೀತಿಯಿಂದ ಸಮಾಜನೀತಿ) ಪರಿವರ್ತನೆಯಾಗಿದೆ. 18-25ರ ಮಧ್ಯದ ಯುವ ಜನತೆಗೆ ಹಿಂದಿನ ಸರ್ಕಾರಗಳ ದುರಾಡಳಿತದ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ, ನಮ್ಮ ಆಡಳಿತಾವಧಿಯಲ್ಲಿ ದೇಶ ಸಕ್ಷಮ ಆಡಳಿತಕ್ಕೆ ಹೇಗೆ ಸಾಕ್ಷಿಯಾಗುತ್ತಿದೆ ಎಂಬುದನ್ನು ಮನದಟ್ಟು ಮಾಡಬೇಕು ಎಂದರು.

ಪಕ್ಷ ಈ ಕೆಲಸದತ್ತ ಗಮನ ನೀಡಬೇಕು ಎಂದರು. ಬೂತ್ ಹಂತದಿಂದ ಪಕ್ಷವನ್ನು ಬಲಗೊಳಿಸುವ ಕೆಲಸ ನಿರಂತರ ಚಾಲ್ತಿಯಲ್ಲಿರಬೇಕು. ವಿಪಕ್ಷಗಳು ದುರ್ಬಲಗೊಂಡಿವೆ ಎಂದು ಪರಿಗಣಿಸುವ ಅಗತ್ಯವಿಲ್ಲ. ಗಡಿಭಾಗಗಳಲ್ಲೂ ಪಕ್ಷದ ಸಂಘಟನೆ ಗಟ್ಟಿಯಾಗಬೇಕು. ಬಿಜೆಪಿ ಮೋರ್ಚಾ ಕಾರ್ಯಕ್ರಮಗಳನ್ನು ನಡೆಸಿ, ಗಡಿ ಜನರನ್ನು ಮುಖ್ಯವೇದಿಕೆಗೆ ತರಬೇಕು. ಈ ಮೂಲಕ 2024ರ ಲೋಕಸಭೆ ಚುನಾವಣೆಗೆ ಕಾರ್ಯಕರ್ತರೆಲ್ಲರೂ ಸಿದ್ಧಗೊಳ್ಳಬೇಕು ಎಂದು ಮೋದಿ ತಿಳಿಸಿದರು.

ನಾವು ದೇಶದ ಜನರನ್ನು ಒಗ್ಗೂಡಿಸಲು ಪ್ರಯತ್ನಿಸಬೇಕು. ಇದನ್ನು ಕೇವಲ ಮತಬ್ಯಾಂಕ್ ಗಮನದಲ್ಲಿಟ್ಟುಕೊಂಡು ಮಾಡಬಾರದು. ಏಕ್ ಭಾರತ್ ಶ್ರೇಷ್ಠ ಭಾರತ್ ನಿರ್ಣಯದಂತೆ ಎಲ್ಲ ರಾಜ್ಯಗಳು ಒಟ್ಟಾಗಿ ಕೆಲಸ ಮಾಡಬೇಕು. ಪರಸ್ಪರ ಸಂಸ್ಕೃತಿ, ಭಾಷೆ, ಸಂಪ್ರದಾಯವನ್ನು ಗೌರವಿಸಿ, ಅಳವಡಿಸಿಕೊಳ್ಳಬೇಕು ಎಂದ ಪ್ರಧಾನಿ, ಕೆಲ ತಿಂಗಳುಗಳ ಹಿಂದೆ ವಾರಾಣಸಿಯಲ್ಲಿ ಏರ್ಪಡಿಸಲಾಗಿದ್ದ ತಮಿಳು ಸಂಗಮ ಕಾರ್ಯಕ್ರಮದ ಉದಾಹರಣೆ ನೀಡಿದರು.

ಶುದ್ಧ ಆಡಳಿತ, ರಾಜಕಾರಣ: ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ 2ನೇ ದಿನ ಸಾಮಾಜಿಕ-ಆರ್ಥಿಕ ನಿರ್ಣಯ ಅಂಗೀಕರಿಸಲಾಗಿದ್ದು, ದುರ್ಬಲ ಆರ್ಥಿಕತೆಯಿಂದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಪರಿವರ್ತಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಶ್ಲಾಘಿಸಲಾಗಿದೆ. ಕಾರ್ಯಕಾರಿಣಿಯಲ್ಲಿ ಬಿಜೆಪಿಯ ತೃಪ್ತ ರಾಜಕಾರಣದ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಸಮಾಜ ಕಲ್ಯಾಣ ಯೋಜನೆಯ ಲಾಭಾಂಶ ವಿತರಣೆ ಮತ್ತು ಸರ್ಕಾರದ ಆರ್ಥಿಕ ನೀತಿಗಳಿಗೆ ಸಂಬಂಧಿಸಿ ಭಾರತ ದಿಕ್ಕುತಪ್ಪಿದ್ದ ಆಡಳಿತದಿಂದ ಶುದ್ಧ ಆಡಳಿತಕ್ಕೆ ಪರಿವರ್ತನೆಯಾಗುತ್ತಿದೆ ಎಂದು ಪಕ್ಷ ಸಮರ್ಥಿಸಿಕೊಂಡಿದೆ. ಭಾರತೀಯ ಆರ್ಥಿಕ ನೀತಿಗೆ ದಿಶೆ ಇರಲಿಲ್ಲ ಮತ್ತು ಆಯ್ದ ಕೆಲವರಿಗೆ ಮಾತ್ರ ಲಾಭವಾಗುತ್ತಿತ್ತು. ಈಗ ನಾವು ಪ್ರಧಾನ ಮಂತ್ರಿ ಆವಾಸ್ ಯೋಜನೆಯಿಂದ ಜನರಿಗೆ ದೊಡ್ಡ ಪ್ರಮಾಣದಲ್ಲಿ ನೆರವಾಗಿದ್ದೇವೆ. ಹಲವಾರು ಸರ್ಕಾರಿ ಯೋಜನೆಗಳೊಂದಿಗೆ ಫಲಾನುಭವಿಗಳಿಗೆ ಅನುಕೂಲವಾಗಿ ಶುದ್ಧ ಆಡಳಿತ ಹಾಗೂ ಶುದ್ಧ ರಾಜಕೀಯದತ್ತ ನಾವು ಸಾಗುತ್ತಿದ್ದೇವೆ ಎಂದು ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ಮಾಧ್ಯಮಕ್ಕೆ ತಿಳಿಸಿದರು.