ನ್ಯೂಸ್

ಪ್ರಧಾನಿ ಮೋದಿ, ಚುನಾವಣಾ ಆಯೋಗವು ಭಾರತದ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದಾರೆ: ರಾಹುಲ್​ ಗಾಂಧಿ ಆರೋಪ | Rahul Gandhi

ಪಾಟ್ನಾ: ಬಿಜೆಪಿ ಮತ್ತು ಚುನಾವಣಾ ಆಯೋಗ ಹರಿಯಾಣ ಚುನಾವಣೆಯನ್ನು ಕದ್ದಿವೆ ಎಂದು ನಾವು ಇಡೀ ಜಗತ್ತಿಗೆ ತೋರಿಸಿದ್ದೇವೆ. ಅಲ್ಲದೆ, ಬಿಹಾರ ಚುನಾವಣೆಯಲ್ಲಿ ಮತಗಳನ್ನು ಕದಿಯಲು ಪ್ರಯತ್ನಿಸುತ್ತಾರೆ ಎಂದು ನನಗೆ ಖಚಿತವಾಗಿದೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಗುರುವಾರ (ನ.6) ಆರೋಪಿಸಿದ್ದಾರೆ.

ಈ ಬಗ್ಗೆ ಬಿಹಾರದ ಪುರ್ನಿಯಾದಲ್ಲಿ ನಡೆದ ಚುನಾವಣಾ ಱಲಿಯಲ್ಲಿ ಮಾತನಾಡಿದ ರಾಹುಲ್​ ಗಾಂಧಿ, 2024 ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮತಗಳನ್ನು ಕದಿಯುವ ಮೂಲಕ ಬಿಜೆಪಿ ಗೆದ್ದಿದೆ ಎಂಬುದಕ್ಕೆ ತಮ್ಮ ಪಕ್ಷ ಈಗಾಗಲೇ ಪುರಾವೆಗಳನ್ನು ತೋರಿಸಿದೆ. ಅಲ್ಲದೆ, ಮತ ಕಳ್ಳತನವನ್ನು ನಿಲ್ಲಿಸುವುದು ಮತ್ತು ಸಂವಿಧಾನವನ್ನು ಉಳಿಸುವುದು ಬಿಹಾರದ ಯುವಕರ ಜವಾಬ್ದಾರಿಯಾಗಿದೆ ಮತ್ತು ನೀವೆಲ್ಲರೂ ಮತಗಟ್ಟೆಗಳಲ್ಲಿ ಜಾಗರೂಕರಾಗಿರಬೇಕು ಎಂದು ರಾಹುಲ್​ ಹೇಳಿದ್ದಾರೆ.

ಭಾರತೀಯ ಪ್ರಜಾಪ್ರಭುತ್ವವನ್ನು ಕೊಲ್ಲಲು ಪ್ರಧಾನಿ ನರೇಂದ್ರ ಮೋದಿ ಮತ್ತು ಚುನಾವಣಾ ಆಯೋಗ (ಇಸಿಐ) ವ್ಯವಸ್ಥಿತವಾಗಿ ಮತ ಕಳ್ಳತನದ ವಿಧಾನವನ್ನು ಅಭಿವೃದ್ಧಿಪಡಿಸಿದೆ. ಅಲ್ಲದೆ, ಚುನಾವಣೆ ನಡೆಯಲಿರುವ ಬಿಹಾರವನ್ನು ಗೆಲ್ಲಲು ಎನ್‌ಡಿಎ ಇದೇ ವಿಧಾನವನ್ನು ಬಳಸಿಕೊಳ್ಳಲಿದೆ ಎಂದು ರಾಹುಲ್ ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ, ನಿತೀಶ್ ಕುಮಾರ್ ವಿರುದ್ಧ ರಾಹುಲ್ ವಾಗ್ದಾಳಿ

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯದ ಯುವಕರನ್ನು ಕಾರ್ಮಿಕರನ್ನಾಗಿ ಮಾಡಿದ್ದಾರೆ. ಬಿಹಾರ ಸರ್ಕಾರವನ್ನು ಕೇಂದ್ರದ ಅಧಿಕಾರಿಗಳು ನಡೆಸುತ್ತಿದ್ದಾರೆ. ಬಿಹಾರ ಮತ್ತೆ ಪ್ರಗತಿ ಸಾಧಿಸಬೇಕಾಗಿದೆ. ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳು ಮತ್ತು ಆಸ್ಪತ್ರೆಗಳು ಬಿಹಾರದಲ್ಲಿ ಸ್ಥಾಪನೆಯಾಗಬೇಕು. ಈ ರಾಜ್ಯವು ಜಾಗತಿಕ ಪ್ರವಾಸೋದ್ಯಮ ಮತ್ತು ಕೈಗಾರಿಕಾ ಕೇಂದ್ರವಾಗಬೇಕು. ಆದರೆ ಪ್ರಧಾನಿ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಗಾಂಧಿ ಟೀಕಾಪ್ರಹಾರ ನೆಡೆಸಿದ್ದಾರೆ.

ಪ್ರಧಾನಿ ಮೋದಿಯ ರಿಮೋಟ್ ಕಂಟ್ರೋಲ್‌ನಲ್ಲಿ ನಿತೀಶ್ ಕುಮಾರ್ ಇರುವುದರಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ಸರ್ಕಾರವನ್ನು ನಿತೀಶ್ ಕುಮಾರ್ ನಡೆಸುತ್ತಿಲ್ಲ ಎಂದು ಗಾಂಧಿ ತಿಳಿಸಿದ್ದಾರೆ. (ಏಜೆನ್ಸೀಸ್)