ನ್ಯೂಸ್

ದೀಪಾವಳಿಗೆ ಕೇಂದ್ರ ಸರ್ಕಾರದಿಂದ ಬಂಪರ್​ ಗಿಫ್ಟ್​: ಪ್ರಧಾನಿ ಮೋದಿ ಘೋಷಣೆ! ಆ ಉಡುಗೊರೆ ಯಾವುದು? PM Modi

PM Modi : ಮುಂಬರುವ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇಶದ ಜನತೆಗೆ ಜಿಎಸ್​ಟಿ ವಿಚಾರದಲ್ಲಿ ಬಹುದೊಡ್ಡ ಉಡುಗೊರೆ ನೀಡುವುದಾಗಿ ಪ್ರಧಾನಿ ಮೋದಿ ಇಂದು (ಆಗಸ್ಟ್​ 15) ಘೋಷಣೆ ಮಾಡಿದರು.

79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು ಬೆಳಗ್ಗೆ 7.30ಕ್ಕೆ ಐತಿಹಾಸಿಕ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದ ಬಳಿಕ ದೇಶದ ಜನತೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡುವಾಗ ಜಿಎಸ್​ಟಿ ವಿಚಾರ ಪ್ರಸ್ತಾಪ ಮಾಡಿದರು.

ಪ್ರಸ್ತುತ ಜಿಎಸ್​ಟಿ ವ್ಯವಸ್ಥೆಯಲ್ಲಿನ ಪ್ರಮುಖ ಪರಿಷ್ಕರಣೆಯನ್ನು ಘೋಷಿಸಿದರು. ಈ ದೀಪಾವಳಿಗೆ ಗಮನಾರ್ಹವಾಗಿ ಕಡಿಮೆ ದರಗಳೊಂದಿಗೆ ಮುಂದಿನ ಪೀಳಿಗೆಯ ತೆರಿಗೆ (ನೆಕ್ಸ್ಟ್​ ಜನರೇಷನ್​ ಟ್ಯಾಕ್ಸ್​) ಆಡಳಿತವನ್ನು ಪರಿಚಯಿಸುವುದಾಗಿ0 ಭರವಸೆ ನೀಡಿದರು. ಇದನ್ನು ಕೇಂದ್ರ ಸರ್ಕಾರದ ದೀಪಾವಳಿ ಹಬ್ಬದ ಉಡುಗೊರೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.

ಈ ದೀಪಾವಳಿಗೆ ನಾನು ಒಂದು ದೊಡ್ಡ ಉಡುಗೊರೆಯನ್ನು ನೀಡಲಿದ್ದೇನೆ. ಕಳೆದ ಎಂಟು ವರ್ಷಗಳಲ್ಲಿ, ನಾವು ಪ್ರಮುಖ ಜಿಎಸ್​ಟಿ ಸುಧಾರಣೆ ಮತ್ತು ಸರಳೀಕೃತ ತೆರಿಗೆಗಳನ್ನು ಜಾರಿಗೆ ತಂದಿದ್ದೇವೆ. ಈಗ, ಪರಿಶೀಲನೆಗೆ ಸಮಯ ಬಂದಿದೆ. ನಾವು ಅದನ್ನು ನಡೆಸಿದ್ದೇವೆ ಮತ್ತು ರಾಜ್ಯಗಳೊಂದಿಗೆ ಸಮಾಲೋಚಿಸಿದ್ದೇವೆ. ಮುಂದಿನ ಪೀಳಿಗೆಯ ಜಿಎಸ್​​ಟಿ ಸುಧಾರಣೆಯನ್ನು ಪರಿಚಯಿಸಲು ನಾವೀಗ ಸಿದ್ಧರಾಗಿದ್ದೇವೆ ಎಂದು ಪ್ರಧಾನಿ ಕೆಂಪು ಕೋಟೆಯಿಂದ ಘೋಷಿಸಿದರು.

ಖಂಡಿತ ಇದು ದೀಪಾವಳಿ ಉಡುಗೊರೆಯಾಗಲಿದೆ. ವ್ಯಕ್ತಿಗಳಿಗೆ ಅಗತ್ಯ ಸೇವೆಗಳ ಮೇಲಿನ ತೆರಿಗೆ ಗಣನೀಯವಾಗಿ ಕಡಿಮೆಯಾಗಲಿದೆ. MSME ಗಳು ಪ್ರಯೋಜನ ಪಡೆಯುತ್ತವೆ. ದಿನನಿತ್ಯದ ಉತ್ಪನ್ನಗಳು ಅಗ್ಗವಾಗುತ್ತವೆ ಮತ್ತು ಇದು ಆರ್ಥಿಕತೆಗೆ ಉತ್ತೇಜನ ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಅಂದಹಾಗೆ, ಪ್ರಸ್ತುತ ಜಿಎಸ್‌ಟಿ ದರಗಳು ಐದು ಮುಖ್ಯ ಸ್ಲ್ಯಾಬ್‌ಗಳಲ್ಲಿ ಬರುತ್ತವೆ. ಶೇ. 0 ರಿಂದ 28 ರವರೆಗೆ, 12 ಮತ್ತು ಶೇ. 18 ರಷ್ಟಿದೆ. ಮೊಬೈಲ್ ಫೋನ್‌ಗಳು ಮತ್ತು ಕಂಪ್ಯೂಟರ್‌ಗಳಂತಹ ಹೆಚ್ಚಿನ ಗ್ರಾಹಕ ಉತ್ಪನ್ನಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಸರಕು ಮತ್ತು ಸೇವೆಗಳಿಗೆ ಪ್ರಮಾಣಿತ ದರಗಳಾಗಿ ಜಿಎಸ್​ಟಿ ಕಾರ್ಯನಿರ್ವಹಿಸುತ್ತವೆ. ಮುಂದಿನ ದಿನಗಳಲ್ಲಿ ಜಿಎಸ್​ಟಿಯಲ್ಲಿ ಇನ್ನಷ್ಟು ಕಡಿತದ ಬಗ್ಗೆ ಪ್ರಧಾನಿ ಮೋದಿ ಸುಳಿವು ನೀಡಿದ್ದಾರೆ. (ಏಜೆನ್ಸೀಸ್​)