ನ್ಯೂಸ್

ಮಾರಿಷಸ್‌ನ ಅತ್ಯುನ್ನತ ನಾಗರಿಕ ಗೌರವ ಪಡೆದ ಮೊದಲ ಭಾರತೀಯ; ಪ್ರಧಾನಿ ಮೋದಿಗೆ ಅಧ್ಯಕ್ಷ ಧರಮ್ ಗೋಖೂಲ್​ರಿಂದ ಪ್ರಶಸ್ತಿ ಪ್ರದಾನ | PM Modi

ಪೋರ್ಟ್ ಲೂಯಿಸ್: ಪ್ರಧಾನಿ ಮೋದಿ(PM Modi) ಎರಡು ದಿನಗಳ ಮಾರಿಷಸ್​ ಪ್ರವಾಸದಲ್ಲಿದ್ದಾರೆ. ಎರಡನೇ ದಿನವಾದ ಇಂದು ಅಂದರೆ ಬುಧವಾರ(ಮಾರ್ಚ್​ 12) ದ್ವೀಪ ರಾಷ್ಟ್ರದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾರಿಷಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ "ದಿ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಅಂಡ್ ಕೀ ಆಫ್ ದಿ ಇಂಡಿಯನ್ ಓಷನ್" ಅನ್ನು ಅಧ್ಯಕ್ಷ ಧರಮ್ ಗೋಖೂಲ್ ಪ್ರದಾನ ಮಾಡಿದರು.

ಮಾರಿಷಸ್ ಸರ್ಕಾರ ಪ್ರಧಾನಿ ಮೋದಿ ಅವರಿಗೆ ತನ್ನ ಅತ್ಯುನ್ನತ ನಾಗರಿಕ ಗೌರವವನ್ನು ನೀಡಿ ಗೌರವಿಸಿದೆ. ಈ ಗೌರವವನ್ನು ಪಡೆದ ಮೊದಲ ಭಾರತೀಯ ಪ್ರಧಾನಿ ಮೋದಿ. ಮಾರಿಷಸ್ ಪ್ರಧಾನಿ ನವೀನ್ ಚಂದ್ರ ರಾಮ್‌ಗೂಲಂ ಅವರ ಆಹ್ವಾನದ ಮೇರೆಗೆ ಅವರು ಎರಡು ದಿನಗಳ ಕಾಲ ದ್ವೀಪರಾಷ್ಟ್ರಕ್ಕೆ ಭೇಟಿ ನೀಡಿದ್ದಾರೆ.

ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಮಾರಿಷಸ್‌ನ ಸಹೋದರ ಸಹೋದರಿಯರೇ, ಮಾರಿಷಸ್‌ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಕ್ಕಾಗಿ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಇದು ನನ್ನ ಗೌರವ ಮಾತ್ರವಲ್ಲ, 1.4 ಬಿಲಿಯನ್ ಭಾರತೀಯರ ಗೌರವ ಎಂದು ಹೇಳಿದರು.

ಮಾರಿಷಸ್ ಒಂದು ನಿಕಟ ಕಡಲ ನೆರೆಯ ರಾಷ್ಟ್ರ, ಹಿಂದೂ ಮಹಾಸಾಗರದ ಪ್ರಮುಖ ಪಾಲುದಾರ ಮತ್ತು ಆಫ್ರಿಕಾ ಖಂಡಕ್ಕೆ ಪ್ರವೇಶ ದ್ವಾರವಾಗಿದೆ. ನಾವು ಇತಿಹಾಸ, ಭೌಗೋಳಿಕತೆ ಮತ್ತು ಸಂಸ್ಕೃತಿಯಿಂದ ಸಂಪರ್ಕ ಹೊಂದಿದ್ದೇವೆ. ಆಳವಾದ ಪರಸ್ಪರ ನಂಬಿಕೆ, ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ಹಂಚಿಕೆಯ ನಂಬಿಕೆ ಮತ್ತು ವೈವಿಧ್ಯತೆಯ ಆಚರಣೆ ನಮ್ಮ ಶಕ್ತಿಗಳಾಗಿವೆ. ನಿಕಟ ಮತ್ತು ಐತಿಹಾಸಿಕ ಜನರಿಂದ ಜನರ ಸಂಪರ್ಕವು ಹಂಚಿಕೆಯ ಹೆಮ್ಮೆಯ ಮೂಲವಾಗಿದೆ ಎಂದು ತಿಳಿಸಿದರು.(ಏಜೆನ್ಸೀಸ್​​)