ಛತ್ತೀಸ್‌ಗಢ: ಈ ವರ್ಷದ ಕೊನೆಯಲ್ಲಿ ಛತ್ತೀಸ್‌ಗಢದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದಕ್ಕಾಗಿ ಭಾರತೀಯ ಜನತಾ ಪಕ್ಷ ತನ್ನ ತಯಾರಿಯನ್ನು ತೀವ್ರಗೊಳಿಸಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಛತ್ತೀಸ್‌ಗಢ ತಲುಪಿದ್ದು, ಇಲ್ಲಿ ಅವರು ಸುಮಾರು 27 ಸಾವಿರ ಕೋಟಿ ರೂಪಾಯಿಗಳ ಯೋಜನೆಗಳನ್ನು ಜನರಿಗೆ ಉಡುಗೊರೆಯಾಗಿ ನೀಡಿದರು. ಇದಾದ ಬಳಿಕ ಜಗದಲ್ಪುರ್ ನಲ್ಲಿ ಚುನಾವಣಾ ರಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಛತ್ತೀಸ್‌ಗಢದಲ್ಲಿ ಎಲ್ಲೆಡೆ ಹರಡಿದ ಭ್ರಷ್ಟಾಚಾರ
ಛತ್ತೀಸ್‌ಗಢದಲ್ಲಿ ಭ್ರಷ್ಟಾಚಾರ ಎಲ್ಲೆಡೆ ಹರಡಿದೆ ಎಂದ ಪ್ರಧಾನಿ ಮೋದಿ ಅವರು ಛತ್ತೀಸ್‌ಗಢದಲ್ಲಿ ಅಪರಾಧ ಉತ್ತುಂಗದಲ್ಲಿದೆ. ಕೊಲೆಗಳಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳ ಸಾಲಿಗೆ ಛತ್ತೀಸ್‌ಗಢವೂ ಸೇರಿಕೊಂಡಿದೆ. ಕೆಲವೊಮ್ಮೆ ಛತ್ತೀಸ್‌ಗಢ ಮತ್ತು ರಾಜಸ್ಥಾನದ ನಡುವೆ ಅಪರಾಧ ಎಲ್ಲಿ ಹೆಚ್ಚಿದೆಯೆಂದು ಸ್ಪರ್ಧೆ ಇದೆ ಎಂದು ತೋರುತ್ತದೆ ಎಂದರು.
ಛತ್ತೀಸ್‌ಗಢಕ್ಕೆ ಕಾಂಗ್ರೆಸ್ ಏನಾದರೂ ನೀಡಿದ್ದರೆ ಅದು ಸುಳ್ಳು ಪ್ರಚಾರ ಮತ್ತು ಹಗರಣ ಆಧಾರಿತ ಸರ್ಕಾರ. ಸುಳ್ಳು ಪ್ರಚಾರದ ನೆಪದಲ್ಲಿ ಜನರ ಕಣ್ಣಿಗೆ ಮಣ್ಣೆರೆಚುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದರು.
ಅಭಿವೃದ್ಧಿಯಾಗಬೇಕಿದೆ ಪ್ರತಿ ರಾಜ್ಯ, ಜಿಲ್ಲೆ ಮತ್ತು ಹಳ್ಳಿ
ಇದಾದ ನಂತರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪ್ರತಿ ರಾಜ್ಯ, ಜಿಲ್ಲೆ ಮತ್ತು ಹಳ್ಳಿ ಅಭಿವೃದ್ಧಿಯಾದಾಗ ಮಾತ್ರ ಅಭಿವೃದ್ಧಿ ಹೊಂದಿದ ಭಾರತದ ಕನಸು ನನಸಾಗುತ್ತದೆ. ಈ ನಿರ್ಣಯವನ್ನು ಈಡೇರಿಸಲು ಇಂದು 27 ಸಾವಿರ ಕೋಟಿ ರೂ.ಗಳ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಾಗಿದೆ. ನಾನು ನಿಮ್ಮೆಲ್ಲರನ್ನು ತುಂಬಾ ಅಭಿನಂದಿಸುತ್ತೇನೆ ಎಂದು ಹೇಳಿದರು.
ಛತ್ತೀಸ್‌ಗಢದಲ್ಲಿ ಹೆಚ್ಚಾಗಲಿವೆ ಉದ್ಯೋಗಾವಕಾಶಗಳು
ಇಂದು ಉದ್ಘಾಟನೆಗೊಂಡ ಮತ್ತು ಶಂಕುಸ್ಥಾಪನೆ ಮಾಡಿದ ಯೋಜನೆಗಳು ಛತ್ತೀಸ್‌ಗಢದ ಪ್ರಗತಿಯ ವೇಗವನ್ನು ಹೆಚ್ಚಿಸುತ್ತವೆ, ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಮತ್ತು ಹೊಸ ಉದ್ಯಮಗಳನ್ನು ಪ್ರೋತ್ಸಾಹಿಸುತ್ತವೆ ಎಂದು ಪ್ರಧಾನಿ ಹೇಳಿದರು. ಭವಿಷ್ಯದಲ್ಲಿಯೂ ನಾವು ಛತ್ತೀಸ್‌ಗಢವನ್ನು ಅದೇ ವೇಗದಲ್ಲಿ ಮುಂದುವರಿಸುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ. ಭಾರತದ ಭವಿಷ್ಯವನ್ನು ಬದಲಾಯಿಸುವಲ್ಲಿ ಛತ್ತೀಸ್‌ಗಢ ಕೂಡ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದರು.
26 ಸಾವಿರ ಕೋಟಿ ರೂ.ಗೂ ಹೆಚ್ಚು ಮೊತ್ತದ ಯೋಜನೆಗಳು
ಜಗಲ್‌ಪುರದ ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಇಂದು 26 ಸಾವಿರ ಕೋಟಿ ರೂ.ಗೂ ಹೆಚ್ಚು ಮೊತ್ತದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದು, ಈ ವೇಳೆ ತಾರೋಕಿ ಮತ್ತು ರಾಯ್‌ಪುರ ನಡುವೆ ರೈಲು ಸಂಚಾರಕ್ಕೆ ಚಾಲನೆ ನೀಡಿದರು.
ದಂತೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ
ಪ್ರಧಾನಿ ಮೋದಿ ಬೆಳಗ್ಗೆ 11 ಗಂಟೆಗೆ ಜಗದಲ್‌ಪುರ ವಿಮಾನ ನಿಲ್ದಾಣ ತಲುಪಿದರು. ಇಲ್ಲಿಂದ ನೇರವಾಗಿ ದಂತೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.