ನ್ಯೂಸ್

ನೌಕಪಡೆಯೊಂದಿಗೆ PM Modi ದೀಪಾವಳಿ ಆಚರಣೆ: ಐಎನ್ಎಸ್ ವಿಕ್ರಾಂತ್ ಪಾಕ್‌ಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡಿತು ಎಂದ ನಮೋ

ಗೋವಾ: ಪ್ರಧಾನಿ ನರೇಂದ್ರ ಮೋದಿಯು (PM Modi) ಐಎನ್‌ಎಸ್ ವಿಕ್ರಾಂತ್‌ನಲ್ಲಿರುವ ನೌಕಾಪಡೆಯನ್ನು ಸೋಮವಾರ (ಅಕ್ಟೋಬರ್,20) ಶ್ಲಾಘಿಸಿದ್ದಾರೆ. ಅಲ್ಲದೆ, ಆಪರೇಷನ್ ಸಿಂಧೂರದ ಸಮಯದಲ್ಲಿ ಯುದ್ಧನೌಕೆ ಪಾಕಿಸ್ತಾನಕ್ಕೆ ನಿದ್ರೆಯಿಲ್ಲದ ರಾತ್ರಿಗಳನ್ನು ನೀಡಿತು ಎಂದು ಹೇಳಿದ್ದಾರೆ.

ಗೋವಾ ಮತ್ತು ಕಾರವಾರ ಕರಾವಳಿಯಲ್ಲಿ ಸ್ಥಳೀಯ ವಿಮಾನವಾಹಕ ನೌಕೆಯಲ್ಲಿರುವ ನೌಕಾಪಡೆಯ ಸಿಬ್ಬಂದಿಯೊಂದಿಗೆ ಈ ವರ್ಷ ದೀಪಾವಳಿ ಆಚರಿಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಮೋದಿ ತಿಳಿಸಿದ್ದಾರೆ.

ಈ ಬಗ್ಗೆ ದೀಪಾವಳಿ ಅಚರಣೆಯ ಸಂದರ್ಭದಲ್ಲಿ ನೌಕಪಡೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಐಎನ್ಎಸ್ ವಿಕ್ರಾಂತ್ ಭಾರತದ ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಅಲ್ಲದೆ, ಆಪರೇಷನ್ ಸಿಂಧೂರದ ಸಮಯದಲ್ಲಿ ಇದರ ಹೆಸರೇ ಪಾಕಿಸ್ತಾನಕ್ಕೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡಿತು ಎಂದು ಪ್ರಧಾನಿ ಹೇಳಿದ್ದಾರೆ. ಇದು ಕೇವಲ ಯುದ್ಧನೌಕೆಯಲ್ಲ, 21 ನೇ ಶತಮಾನದ ಭಾರತದ ಕಠಿಣ ಪರಿಶ್ರಮ, ಪ್ರತಿಭೆ, ಪ್ರಭಾವ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಮೋದಿ ಹೇಳಿದ್ದಾರೆ.

ಐಎನ್‌ಎಸ್ ವಿಕ್ರಾಂತ್ ಭಾರತದ ಕಠಿಣ ಪರಿಶ್ರಮ ಫಲ: PM ಮೋದಿ

ಯುದ್ಧನೌಕೆಯಲ್ಲಿ ರಾತ್ರಿ ಕಳೆದ ಅನುಭವವನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಈ ಕ್ಷಣದಲ್ಲಿ ಬದುಕುವುದರ ಮಹತ್ವವನ್ನು ನಾನು ಕಲಿತಿದ್ದೇನೆ. ನಿಮ್ಮ ಸಮರ್ಪಣೆ ಎಷ್ಟು ಅಗಾಧವಾಗಿದೆ ಎಂದರೆ ನಾನು ಒದನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಾಗಲಿಲ್ಲ. ಆದರೆ ನಾನು ಖಂಡಿತವಾಗಿಯೂ ಇದನ್ನು ಅನುಭವಿಸಿದ್ದೇನೆ. ಪ್ರತಿದಿನ ಇದನ್ನು ಬದುಕುವುದು ಎಷ್ಟು ಸವಾಲಿನದ್ದಾಗಿರಬಹುದು ಎಂದು ನಾನು ಊಹಿಸಬಲ್ಲೆ ಎಂದು ಮೋದಿ ತಿಳಿಸಿದ್ದಾರೆ.

ಮುಂದುವರೆದು ಮಾತನಾಡಿದ ಮೋದಿ, ಇಂದು, ಒಂದು ಕಡೆ ನನಗೆ ಅನಂತ ದಿಗಂತಗಳಿವೆ, ಅನಂತ ಆಕಾಶವಿದೆ, ಮತ್ತು ಇನ್ನೊಂದು ಬದಿಯಲ್ಲಿ ಅನಂತ ಶಕ್ತಿಗಳನ್ನು ಒಳಗೊಂಡಿರುವ ಈ ದೈತ್ಯ ಐಎನ್ಎಸ್ ವಿಕ್ರಾಂತ್ ನಮ್ಮಲ್ಲಿದೆ ಎಂದಿದ್ದಾರೆ. ಅಲ್ಲದೆ, ಸಾಗರದ ನೀರಿನ ಮೇಲೆ ಸೂರ್ಯನ ಕಿರಣಗಳ ಹೊಳಪು ವೀರ ಸೈನಿಕರು ಬೆಳಗಿದ ದೀಪಾವಳಿ ದೀಪಗಳಂತಿದೆ ಎಂದು ಮೋದಿ ಹೇಳಿದ್ದಾರೆ.

ಐಎನ್ಎಸ್ ವಿಕ್ರಾಂತ್ ಆತ್ಮನಿರ್ಭರ ಭಾರತದ ಸಂಕೇತ

ಐಎನ್ಎಸ್ ವಿಕ್ರಾಂತ್ ಆತ್ಮನಿರ್ಭರ ಭಾರತದ ಪ್ರಬಲ ಸಂಕೇತ ಮತ್ತು ಅವರ ಪ್ರಮುಖ ಮೇಕ್ ಇನ್ ಇಂಡಿಯಾ ಉಪಕ್ರಮದ ಯಶಸ್ಸು ಎಂದು ಮೋದಿ ಬಣ್ಣಿಸಿದ್ದಾರೆ. ಅಲ್ಲದೆ, ಸಾಗರಗಳನ್ನು ದಾಟಿ ಸಾಗುವ ಸ್ಥಳೀಯ ವಿಕ್ರಾಂತ್, ಭಾರತದ ಬೆಳೆಯುತ್ತಿರುವ ಮಿಲಿಟರಿ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಅಲ್ಲದೆ, ಸಶಸ್ತ್ರ ಪಡೆಗಳನ್ನು ಬಲಪಡಿಸಲು ಸ್ವಾವಲಂಬನೆ ಅತ್ಯಗತ್ಯವಾಗಿದೆ ಎಂದು ಮೋದಿ ಒತ್ತಿ ಹೇಳಿದ್ದಾರೆ.

ಕಳೆದ ದಶಕದಲ್ಲಿ, ಭಾರತದ ರಕ್ಷಣಾ ವಲಯವು ದೇಶೀಕರಣದತ್ತ ತ್ವರಿತ ಹೆಜ್ಜೆ ಇಟ್ಟಿದೆ. ಆದರೆ ಕಳೆದ 11 ವರ್ಷಗಳಲ್ಲಿ ಉತ್ಪಾದನೆಯು ಮೂರು ಪಟ್ಟು ಹೆಚ್ಚಾಗಿದೆ. ಅಲ್ಲದೆ, ಸರಿಸುಮಾರು ಪ್ರತಿ 40 ದಿನಗಳಿಗೊಮ್ಮೆ ಹೊಸ ಯುದ್ಧನೌಕೆ ಅಥವಾ ಜಲಾಂತರ್ಗಾಮಿ ನೌಕಾಪಡೆಗೆ ಸೇರುತ್ತಿದೆ ಎಂದು ಮೋದಿ ತಿಳಿಸಿದ್ದಾರೆ.

ನಮ್ಮ ಬ್ರಹ್ಮೋಸ್ ಕ್ಷಿಪಣಿಗೆ ಜಾಗತಿಕವಾಗಿ ಬೇಡಿಕೆ ಇದೆ. ಭಾರತ ಶೀಘ್ರದಲ್ಲೇ ವಿಶ್ವದ ಅಗ್ರ ರಕ್ಷಣಾ ರಫ್ತುದಾರರಲ್ಲಿ ಸ್ಥಾನ ಪಡೆಯಲಿದೆ ಎಂಬ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದರು.ಈ ಹೊಸ ರೂಪಾಂತರದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಕ್ಕಾಗಿ ನವೋದ್ಯಮಗಳು ಮತ್ತು ಸ್ಥಳೀಯ ರಕ್ಷಣಾ ಘಟಕಗಳನ್ನು ಮೋದಿ ಶ್ಲಾಘಿಸಿದರು. (ಏಜೆನ್ಸೀಸ್)