ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಹುಟ್ಟಿದಹಬ್ಬದ ಸಂದರ್ಭಕ್ಕೆ ವಿರೋಧ ಪಕ್ಷ ಕಾಂಗ್ರೆಸ್ನ ನಾಯಕ ರಾಹುಲ್ ಗಾಂಧಿ ಅವರು "ಹ್ಯಾಪಿ ಬರ್ತ್ಡೇ, ಮೋದಿ ಜಿ" ಎಂದು ಚುಟುಕಾಗಿ ವಿಶ್ ಮಾಡಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಬಹುತೇಕ ನಿತ್ಯವೂ ಟೀಕಾತ್ಮಕ ಹೇಳಿಕೆಗಳನ್ನು ಶೇರ್ ಮಾಡುವ ತಮ್ಮ ಟ್ವಿಟರ್ ಖಾತೆಯಲ್ಲಿ ರಾಗಾ ಈ ಶುಭ ಹಾರೈಕೆಯನ್ನು ಶೇರ್ ಮಾಡಿದ್ದಾರೆ.
ಮೋದಿ ಜನ್ಮದಿನಕ್ಕೆ ಅವರ ಬೆಂಬಲಿಗರು ಹಾಗೂ ವಿರೋಧಿಗಳು ಸಮಾನವಾಗಿ ಶುಭಾಶಯಗಳನ್ನು ಕೋರುತ್ತಿದ್ದಾರೆ. ಮೋದಿ ವಿರುದ್ಧ ಆಗಾಗ ಹೇಳಿಕೆ ನೀಡುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, "ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ದೀರ್ಘಾಯುಷ್ಯ ಮತ್ತು ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ. ಟ್ವಿಟರ್ನಲ್ಲಿ 'ಹ್ಯಾಪಿಬಿಡೇಮೋದಿಜಿ' ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುತ್ತಿದೆ.
ಅದೇ ಮತ್ತೊಂದೆಡೆ, ಕಾಂಗ್ರೆಸ್ ಪಕ್ಷವು ಮೋದಿ ಜನ್ಮದಿನವನ್ನು 'ರಾಷ್ಟ್ರೀಯ ನಿರುದ್ಯೋಗ ದಿವಸ'ವಾಗಿ ಆಚರಿಸುವ ಮೂಲಕ ಮೋದಿ ಪರ ಅಲೆಗೆ ಅಧಿಕೃತ ಪ್ರತ್ಯುತ್ತರ ನೀಡುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಸರಣಿ ಟ್ವೀಟ್ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
ಒಂದು ಟ್ವೀಟ್ನಲ್ಲಿ, "ಇಂದು ಬೆಳಿಗ್ಗೆ 9.30 ರವರೆಗೆ ಮೋದಿಜಿ ಅವರಿಗೆ ಜನ್ಮದಿನದ ಶುಭಾಶಯ ಕೋರುವ ಟ್ವೀಟ್ಗಳ ಸಂಖ್ಯೆ 199 ಸಾವಿರವಿತ್ತು; ಅದೇ ರಾಷ್ಟ್ರೀಯ ನಿರುದ್ಯೋಗ ದಿನದ ಕುರಿತ ಟ್ವೀಟ್ಗಳ ಸಂಖ್ಯೆ 879 ಸಾವಿರಕ್ಕೂ ಹೆಚ್ಚಿತ್ತು. ಮೋದಿಜಿ, ನೀವು ನೋಡುತ್ತಿದ್ದೀರಾ, ಅಲ್ವಾ?" ಎಂದು ಶ್ರೀನಿವಾಸ್ ಪ್ರಶ್ನಿಸಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, "45 ವರ್ಷಗಳಲ್ಲಿ ಅತಿಕೆಟ್ಟದಾದ ನಿರುದ್ಯೋಗ, 40 ವರ್ಷಗಳಲ್ಲಿ ಅತ್ಯಂತ ಕಡಿಮೆ ಜಿಡಿಪಿ, 14 ವರ್ಷಗಳಲ್ಲಿ ಅತಿಕಡಿಮೆ ಕೃಷಿ ಆದಾಯ, 20 ಲಕ್ಷ ಕೋಟಿ ಜುಮ್ಲಾ ಪ್ಯಾಕೇಜ್, 150 ಮಿಲಿಯನ್ ನೌಕರಿ ನಷ್ಟ, ಪೆಟ್ರೋಲ್ಗೆ ಲೀಟರ್ಗೆ 110 ರೂ., ಡೀಸಲ್ಗೆ ಲೀಟರ್ಗೆ 100 ರೂ." ಎಂದು ಪಟ್ಟಿ ಮಾಡಿ, "ಇದಕ್ಕಾಗೇ ದೇಶ #ನ್ಯಾಷನಲ್ ಅನೆಂಪ್ಲಾಯ್ಮೆಂಟ್ಡೇ ಆಚರಿಸುತ್ತಿದೆ" ಎಂದಿದ್ದಾರೆ. (ಏಜೆನ್ಸೀಸ್)