ನವದೆಹಲಿ: ಕರೊನಾ ವೈರಸ್ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕಾಗಿ ಇಡೀ ದೇಶವನ್ನೇ ಲಾಕ್ಡೌನ್ ಮಾಡಲಾಗಿದೆ. ಸದ್ಯ ಅದು ಪಸರಿಸುತ್ತಿರುವ ವೇಗ ತಡೆಯಲು ಸಾಮಾಜಿಕ ಅಂತರವೊಂದೇ ಮಾರ್ಗ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿಯವರು ತಾವೂ ಸ್ವತಃ ಅದನ್ನು ಪಾಲಿಸುತ್ತಿದ್ದಾರೆ.
ಸಾಂಕ್ರಾಮಿಕ ರೋಗ ಕರೊನಾ ವೈರಸ್ ಬಗ್ಗೆ ಚರ್ಚಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ತಮ್ಮ ನಿವಾಸದಲ್ಲಿ ಸಚಿವ ಸಂಪುಟದ ಸಭೆ ನಡೆಸಿದ್ದು, ಈ ವೇಳೆ ಭಾಗವಹಿಸಿದ್ದವರೆಲ್ಲ ಪರಸ್ಪರ ಅಂತರ ಕಾಯ್ದುಕೊಂಡಿದ್ದಾರೆ. ಒಂದೇ ಟೇಬಲ್ನಲ್ಲಿ ಅಕ್ಕಪಕ್ಕ ಕುಳಿತುಕೊಳ್ಳದೆ ಒಬ್ಬರಿಗೊಬ್ಬರು ಅಂತರದಲ್ಲಿ ಕುಳಿತಿರುವ ಫೋಟೋ ವೈರಲ್ ಆಗಿದೆ.
ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರೊನಾ ನಿಯಂತ್ರಣ, ಲಾಕ್ಡೌನ್ಗೆ ಸಂಬಂಧಪಟ್ಟ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ ಎಂದುವರದಿಯಾಗಿದೆ.
ಸದ್ಯ ಭಾರತದಲ್ಲಿ 560 ಜನರಿಗೆ ಕರೊನಾ ತಗುಲಿದೆ. ಅವರಲ್ಲಿ 40 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪರಿಸ್ಥಿತಿ ಕೈ ಮೀರುವ ಮೊದಲು ಎಚ್ಚೆತ್ತುಕೊಳ್ಳೋಣ ಎಂದು ಮೋದಿಯವರು ಪದೇಪದೆ ಎಚ್ಚರಿಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಸೋಷಿಯಲ್ ಡಿಸ್ಟನ್ಸ್ ನಲ್ಲಿ ಕ್ಯಾಬಿನೆಟ್ ಮೀಟಿಂಗ್ ನಡೆಸಿದ ಫೋಟೋವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. (ಏಜೆನ್ಸೀಸ್)