ನ್ಯೂಸ್

ಪಿಎಂ ಕಿಸಾನ್ ಸಮ್ಮಾನ್ ನಿಧಿಯ 8ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ: ಅಕ್ಷಯ ತೃತೀಯದಂದೇ ರೈತರಿಗೆ ಸಿಹಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪಿಎಂಕೆಎಸ್‌ಎನ್‌ವೈ) ಎಂಟನೇ ಕಂತು ಬಿಡುಗಡೆ ಮಾಡುವ ಮೂಲಕ ಮೇ 14ರ ಅಕ್ಷಯ ತೃತೀಯ ದಿನದಂದೇ ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ, ಕರೊನಾ ಎರಡನೇ ಅಲೆಯಿಂದ ಕಂಗಾಲಾಗಿರುವ ರೈತರಿಗೆ ಹಣ ಬಿಡುಗಡೆ ಮಾಡುವ ಮೂಲಕ ಮೋದಿ ಆಸರೆಯಾಗಿದ್ದಾರೆ.

ಕಿಸಾನ್ ಸಮ್ಮಾನ್ ನಿಧಿಯ 7ನೇ ಕಂತನ್ನು ಡಿಸೆಂಬರ್ 25, 2020ರಲ್ಲಿ ಬಿಡುಗಡೆ ಮಾಡಿದ್ದರು. ಅರ್ಹ ಫಲಾನುಭವಿಗಳ ಬ್ಯಾಂಕ್​ ಖಾತೆಗೆ ಹಣ ಜಮಾ ಆಗಿತ್ತು. ಇದೀಗ 8ನೇ ಕಂತಿನ ಬಿಡುಗಡೆಯಾಗಿದ್ದು, 9.5 ಕೋಟಿಗಿಂತ ಹೆಚ್ಚು ಫಲಾನುಭವಿಗಳ ಖಾತೆಯನ್ನು ಇದು ಸೇರಿದೆ.

ಒಟ್ಟು 19 ಸಾವಿರ ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಇಷ್ಟೂ ಹಣ ಅರ್ಹರಿಗೆ ಹಂಚಿಕೆಯಾಗಿದೆ. ಈ ಮೂಲಕ 2021-22ರ ಆರ್ಥಿಕ ವರ್ಷದ ಪಿಎಂ ಕಿಸಾನ್ ಯೋಜನೆಯ ಮೊದಲ ಕಂತು ರೈತರನ್ನು ಸೇರಿದೆ.

ಇಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್​ನಲ್ಲಿ ಬಟನ್​ ಒತ್ತುವ ಮೂಲಕ ಪ್ರಧಾನಿ ಮೋದಿ ಅವರು ಹಣ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಕೆಲ ಫಲಾನುಭವಿಗಳೊಂದಿಗೆ ಸಂವಾದ ಸಹ ನಡೆಸಿದರು.

ಈ ಯೋಜನೆ ಅಡಿ, ಅರ್ಹ ಫಲಾನುಭವಿ ರೈತ ಕುಟುಂಬಗಳಿಗೆ ವರ್ಷಕ್ಕೆ 6000 ರೂಪಾಯಿ ಸಿಗಲಿದೆ. ನಾಲ್ಕು ತಿಂಗಳಿಗೊಮ್ಮೆ ತಲಾ 2 ಸಾವಿರ ರೂಪಾಯಿಗಳು ವರ್ಗಾವಣೆ ಆಗಲಿದೆ. ಇದಾಗಲೇ ಈ ಯೋಜನೆ ಅಡಿ ಇಲ್ಲಿಯವರೆಗೆ 1.15 ಲಕ್ಷ ಕೋಟಿ ಬಿಡುಗಡೆ ಮಾಡಲಾಗಿದೆ. 2019ರ ಡಿಸೆಂಬರ್‌ನಿಂದ ಈ ಯೋಜನೆ ಜಾರಿಗೆ ಬಂದಿದ್ದು, ಸರ್ಕಾರಕ್ಕೆ ವರ್ಷಕ್ಕೆ 75 ಸಾವಿರ ಕೋಟಿ ರೂ. ವೆಚ್ಚವಾಗಲಿದೆ.