ಮುಂಬೈ: ಪ್ರಧಾನಿ ನರೇಂದ್ರ ಮೋದಿ ಭಾನುವಾರ(ಮಾರ್ಚ್ 30) ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಕಚೇರಿಗೆ ಭೇಟಿ ನೀಡಿ ನಿವೃತ್ತಿ ಘೋಷಿಸಿದ್ದಾರೆ ಎಂದು ಶಿವಸೇನೆಯ ಫೈರ್‌ಬ್ರಾಂಡ್ ನಾಯಕ ಸಂಜಯ್ ರಾವತ್(Sanjay Raut) ಸೋಮವಾರ ಹೇಳಿದ್ದಾರೆ. ಜತೆಗೆ ಮುಂದಿನ ಪ್ರಧಾನಿ ಈ ರಾಜ್ಯದವರೇ ಆಗಿರುತ್ತಾರೆ ಎಂದು ಅವರು ಹೇಳಿದರು.
ಇದನ್ನು ಓದಿ: 'ಮನ್ ಕಿ ಬಾತ್'ನಲ್ಲಿ ಪ್ರಧಾನಿ ಮೋದಿ ಶ್ಲಾಘಿಸಿದ ‘ಸೂರಜ್ ಚೆರುಕಟ್ಟೆ’ ಯಾರು?; ‘ನಮೋ’ ಹೇಳಿದ್ದೇನು? | PM Modi
ಮುಂಬೈನಲ್ಲಿ ಮಾತನಾಡಿದ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವರ್, ಪ್ರಧಾನಿ ಮೋದಿ ತಮ್ಮ ನಿವೃತ್ತಿಯನ್ನು ಘೋಷಿಸಲು ಆರ್‌ಎಸ್‌ಎಸ್ ಕಚೇರಿಗೆ ಹೋಗಿದ್ದರು. ನನಗೆ ತಿಳಿದ ಮಟ್ಟಿಗೆ ಅವರು 10-11 ವರ್ಷಗಳಲ್ಲಿ ಒಮ್ಮೆಯೂ ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಿಲ್ಲ. ಆರ್‌ಎಸ್‌ಎಸ್ ನಾಯಕತ್ವದಲ್ಲಿ ಬದಲಾವಣೆ ಬಯಸುತ್ತದೆ. ಪ್ರಧಾನಿ ಮೋದಿ ಈಗ ಹೊರಡುತ್ತಿದ್ದಾರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿಯನ್ನು ಆರ್‌ಎಸ್‌ಎಸ್ ನಿರ್ಧರಿಸುತ್ತದೆ ಮತ್ತು ಅವರು ಮಹಾರಾಷ್ಟ್ರದವರಾಗಿರುತ್ತಾರೆ ಎಂದು ಸಂಜಯ್ ರಾವತ್ ಹೇಳಿದರು. ಅದಕ್ಕಾಗಿಯೇ ಮೋದಿಯವರನ್ನು ನಾಗ್ಪುರಕ್ಕೆ ಕರೆಸಿ ಮುಚ್ಚಿದ ಬಾಗಿಲಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು ಎಂದು ತಿಳಿಸಿದರು.
ಈ ಕುರಿತು ಕಾಂಗ್ರೆಸ್ ನಾಯಕರೊಬ್ಬರು ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಸಂಜಯ್ ರಾವತ್ ಅವರ ಮಾತಿಗೆ ತಾವು ಸಹಮತ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ. ಅವನು ಹೇಳಿದ್ದು ಸರಿ ಅಂತ ನನಗನ್ನಿಸುತ್ತೆ. ಅವರು 75 ವರ್ಷ ದಾಟಿದ ಜನರನ್ನು ನಿವೃತ್ತಿಗೊಳಿಸುತ್ತಾರೆ. ಪ್ರಧಾನಿ ಮೋದಿ ಅವರಿಗೂ ಕೂಡ ವಯಸ್ಸಾಗುತ್ತಿದೆ. ಬಹುಶಃ ಅವರು ಈಗ ನಿವೃತ್ತಿಯ ಬಗ್ಗೆ ಯೋಚಿಸುತ್ತಿರಬಹುದು. ಅವರನ್ನು ಸಂತೋಷಪಡಿಸಲು ಅವರು ಅಲ್ಲಿಗೆ ಹೋಗಿರಬಹುದು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿ ಬಗ್ಗೆ ಇರುವ ಊಹಾಪೋಹಗಳನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೋಮವಾರ ತಳ್ಳಿಹಾಕಿದ್ದಾರೆ. ಪ್ರಧಾನಿ ಹಲವು ವರ್ಷಗಳ ಕಾಲ ದೇಶವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ. 2029ರಲ್ಲಿ ನಾವು ಮೋದಿಯನ್ನು ಮತ್ತೆ ಪ್ರಧಾನಿಯಾಗಿ ನೋಡುತ್ತೇವೆ ಎಂದು ತಿಳಿಸಿದರು.
ಅವರ ಉತ್ತರಾಧಿಕಾರಿಯನ್ನು ಹುಡುಕುವ ಅಗತ್ಯವಿಲ್ಲ. ಅವರು (ಮೋದಿ) ನಮ್ಮ ನಾಯಕ ಮತ್ತು ಅವರು ಆ ಹುದ್ದೆಯಲ್ಲಿ ಮುಂದುವರಿಯುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ತಂದೆ ಜೀವಂತವಾಗಿರುವಾಗ ಉತ್ತರಾಧಿಕಾರದ ಬಗ್ಗೆ ಚರ್ಚಿಸುವುದು ಸೂಕ್ತವಲ್ಲ. ಇದು ಮೊಘಲ್ ಸಂಸ್ಕೃತಿ. ಇದನ್ನು ಚರ್ಚಿಸಲು ಇದು ಸಮಯವಲ್ಲ ಎಂದು ಹೇಳಿದರು.(ಏಜೆನ್ಸೀಸ್)