ವುಹಾನ್: ಕೊರೊನಾ ವೈರಸ್ ಹೆಚ್ಚಾಗಿ ಹರಡಿರುವ ಚೀನಾದ ವುಹಾನ್ ನಗರದಲ್ಲಿ ಸಿಲುಕಿರುವ ನೂರಾರು ಪಾಕಿಸ್ತಾನಿ ವಿದ್ಯಾರ್ಥಿಗಳು ತಮ್ಮನ್ನು ರಕ್ಷಿಸುವಂತೆ ಪಾಕ್ ಸರ್ಕಾರವನ್ನು ಅಂಗಲಾಚಿದ್ದು, ದಿನನಿತ್ಯ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಿದ್ದೇವೆ ಎಂದು ನೋವು ತೋಡಿಕೊಂಡಿದ್ದಾರೆ.
ವುಹಾನ್ನಲ್ಲಿ 2015ರಿಂದ ಮೆಡಿಸಿನ್ ಅಧ್ಯಯನ ಮಾಡುತ್ತಿರುವ ರೆಹಾನ್ ರಶೀದ್ ತಮ್ಮದೇ ಪಾಕ್ ಸರ್ಕಾರವನ್ನು ಟೀಕಿಸಿದ್ದಾರೆ. ನಗರದಲ್ಲಿ ಸಿಲುಕಿರುವ ಸುಮಾರು 800 ವಿದ್ಯಾರ್ಥಿಗಳನ್ನು ಮರಳಿ ಕರೆತರಲು ತಿರಸ್ಕರಿಸಿರುವ ಪ್ರಧಾನಿ ಇಮ್ರಾನ್ ಖಾನ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ವೈರಸ್ ಹರಡಿದ ದಿನದಿಂದ ನಗರದಲ್ಲೇ ಚೀನಾ ಅಧಿಕಾರಿಗಳಿಂದ ತಾತ್ಕಾಲಿಕ ಬಂಧನಕ್ಕೊಳಗಾಗಿರುವುದಾಗಿ ರಶೀದ್ ಹೇಳಿಕೊಂಡಿದ್ದಾರೆ.
ವುಹಾನ್ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಐವರು ವಿದ್ಯಾರ್ಥಿಗಳಿಗೆ ವೈರಸ್ ಸೋಂಕು ತಗುಲಿರುವುದಾಗಿ ರಶೀದ್ ಮಾಹಿತಿ ನೀಡಿದ್ದಾರೆ.
ಇನ್ನು ನಾವು ಸ್ಥಳಾಂತರವಾಗಿಲ್ಲ ಮತ್ತು ನಮಗೆ ಯಾವುದೇ ಬೆಂಬಲ ವ್ಯಕ್ತವಾಗುತ್ತಿಲ್ಲ ಎಂದು ರಶೀದ್ ನೋವಿನಿಂದ ಹೇಳಿಕೊಂಡಿದ್ದಾರೆ. ನಾವೆಲ್ಲರೂ ಭಯಭೀತರಾಗಿದ್ದೇವೆ. ಇಲ್ಲಿ ತುಂಬಾ ಭಯದ ವಾತವರಣ ಇದೆ. ಸುಮಾರು 20 ದಿನಗಳಿಂದ ಹಾಸ್ಟೆಲ್ ರೂಮ್ನಲ್ಲಿ ಬಂಧನವಾಗಿದ್ದೇವೆ. ಕಳೆದ ಮೂರು ದಿನಗಳಿಂದ ಊಟಕ್ಕೂ ನಮ್ಮನ್ನು ಹೊರಗಡೆ ಬಿಡುತ್ತಿಲ್ಲ. ನಾವು ಭಯದಿಂದ ಸುತ್ತುವರಿದಿದ್ದೇವೆ ಎಂದು ಕೊರೊನಾ ವೈರಸ್ ಸೃಷ್ಟಿಸಿರುವ ಕರಾಳತೆಯನ್ನು ಬಿಚ್ಚಿಡುತ್ತಾ ರಕ್ಷಣೆಗಾಗಿ ಮೊರೆಯಿಡುತ್ತಿದ್ದಾರೆ.
ತಮ್ಮ ನೆರೆಯ ರಾಷ್ಟ್ರಗಳಾದ ಭಾರತ, ನೇಪಾಳ ಹಾಗೂ ಬಾಂಗ್ಲಾದೇಶ ಸೇರಿದಂತೆ ಯುಎಸ್, ಯುಕೆ ಮತ್ತಿತರ ರಾಷ್ಟ್ರಗಳು ತಮ್ಮ ಪ್ರಜೆಗಳನ್ನು ಸುರಕ್ಷಿತವಾಗಿ ಕರೆಯಿಸಿಕೊಂಡಿರುವುದಕ್ಕೆ ಪಾಕ್ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದಾರೆ. ಆದರೆ, ಪಾಕ್ ತಮ್ಮ ಪ್ರಜೆಗಳನ್ನು ಶಾಂತವಾಗಿ ಉಳಿಯುವಂತೆ ಒತ್ತಾಯಿಸಿದೆ.
ಚೀನಾದೊಂದಿಗೆ ನಿಕಟ ಸಂಬಂಧ ಹೊಂದಿರುವ ಪಾಕ್, ಕೊರೊನಾ ವೈರಸ್ ಅನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತಿದೆ ಎಂದು ಚೀನಾಗೆ ಪದೇಪದೆ ಅಭಿನಂದನೆ ಸಲ್ಲಿಸುತ್ತಿದೆ. ಆದರೂ ಕೂಡ ತಮ್ಮ ಪ್ರಜೆಗಳನ್ನು ಕರೆತರುವ ಪ್ರಯತ್ನಕ್ಕೆ ಕೈಹಾಕಿಲ್ಲ. ಅದಕ್ಕೆ ಕಾರಣ ವೈರಸ್ ಸೋಂಕನ್ನು ಸಮರ್ಥವಾಗಿ ನಿಭಾಯಿಸಬಲ್ಲ ವೈದ್ಯಕೀಯ ಸೌಲಭ್ಯ ಪಾಕ್ನಲ್ಲಿ ಇಲ್ಲದಿರುವುದು ಕಾರಣ ಎಂದು ಚರ್ಚೆಯಾಗುತ್ತಿದೆ. (ಏಜೆನ್ಸೀಸ್)