ಮುಂಬೈ: ಮುಂಬೈನ ಬಾಂದ್ರಾ ಉಪನಗರದಲ್ಲಿ ಶನಿವಾರ ತಡರಾತ್ರಿ ಬಾಲಿವುಡ್ ನಟಿ ರವೀನಾ ಟಂಡನ್ ಮೂವರ ಮೇಲೆ ದೌರ್ಜನ್ಯ ಎಸಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಸ್ಥಳೀಯರು ನಟಿಯನ್ನು ಸುತ್ತುವರೆದು ಹಲ್ಲೆ ಮಾಡಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಬಾಲಿವುಡ್ ನಟಿ ರವೀನಾ ಟಂಡನ್ ಕುಡಿದ ಮತ್ತಿನಲ್ಲಿ ಮೂವರ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಇದರಿಂದ ರೊಚ್ಚಿಗೆದ್ದ ಸ್ಥಳೀಯರು ನಟಿ ರವೀನಾರನ್ನು ಸುತ್ತುವರೆದು ಪ್ರತಿಹಲ್ಲೆ ಮಾಡಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಿಜ್ವಿ ಕಾಲೇಜು ಬಳಿಯ ಕಾರ್ಟರ್ ರಸ್ತೆಯಲ್ಲಿ ರವೀನಾ ಅವರ ಕಾರು ಚಾಲಕ ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿ ಮೂವರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಜನ ಸೇರಿ ಇದನ್ನು ಪ್ರಶ್ನಿಸಿದಾಗ ಕಾರಿನಲ್ಲಿ ಕುಡಿದ ಮತ್ತಿನಲ್ಲಿದ್ದ ರವೀನಾ ಟಂಡನ್ ಕಾರಿನಿಂದ ಇಳಿದು ಬಂದು ಅಪಘಾತ ಸಂತ್ರಸ್ತರನ್ನು ನಿಂದಿಸಿ ಅವರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 'ದಯವಿಟ್ಟು ವೀಡಿಯೋ ಮಾಡಬೇಡಿ...ದಯವಿಟ್ಟು ನನಗೆ ಹೊಡೆಯಬೇಡಿ ಎಂದು ನಟಿ ಹೇಳುತ್ತಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ.
ನಂತರ ಅಪಘಾತ ಸಂತ್ರಸ್ತರ ಸಂಬಂಧಿ ಬಾಂದ್ರಾ ನಿವಾಸಿ ಮೊಹಮ್ಮದ್ ಘಟನೆಯನ್ನು ವಿವರಿಸಿದ್ದು, ತನ್ನ ತಾಯಿ, ಸಹೋದರಿ ಮತ್ತು ಸೊಸೆ ರಿಜ್ವಿ ಕಾಲೇಜು ಬಳಿ ಹೋಗುತ್ತಿದ್ದಾಗ ರವೀನಾ ಅವರ ಕಾರು ಚಾಲಕ ತನ್ನ ತಾಯಿಯ ಮೇಲೆ ಕಾರು ಹತ್ತಿಸಿದ್ದಾನೆ ಎಂದು ಅವರು ದೂರಿದ್ದಾರೆ. ಇದನ್ನು ಪ್ರಶ್ನಿಸಿದಾಗ ಕಾರು ಚಾಲಕ ನನ್ನ ಸೊಸೆ ಮತ್ತು ನನ್ನ ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ, ಕುಡಿದ ಅಮಲಿನಲ್ಲಿದ್ದ ರವೀನಾ ಕೂಡ ನನ್ನ ತಾಯಿಗೆ ಹೊಡೆದಿದ್ದಾರೆ ಅವಳ ತಲೆಗೆ ಗಂಭೀರ ಗಾಯಗಳಾಗಿವೆ ಎಂದು ಮೊಹಮ್ಮದ್ ದೂರಿದ್ದಾರೆ. ಆದರೆ ಘಟನೆ ಕುರಿತು ರವೀನಾ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.