ನ್ಯೂಸ್

ಗಂಡನ ಕಿರುಕುಳಕ್ಕೆ ಬೇಸತ್ತು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಚಲನಚಿತ್ರ ಹಿನ್ನೆಲೆ ಗಾಯಕಿ; ಸಾವಿಗೂ ಮೊದಲು ತಾಯಿಗೆ ವಾಟ್ಸ್​ಆ್ಯಪ್​ ಸಂದೇಶ

lakshmihegde

ಬೆಂಗಳೂರು: ಚಲನಚಿತ್ರ ಹಿನ್ನೆಲೆ ಗಾಯಕಿ ಸುಶ್ಮಿತಾ (26) ಇಂದು ತಮ್ಮ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಾಗರಭಾವಿಯಲ್ಲಿ ಘಟನೆ ನಡೆದಿದ್ದು, ಆತ್ಮಹತ್ಯೆಗೆ ಪತಿ ಹಾಗೂ ಆತನ ಮನೆಯವರು ಕೊಡುತ್ತಿದ್ದ ವರದಕ್ಷಿಣೆ ಕಿರುಕುಳವೇ ಕಾರಣ ಎನ್ನಲಾಗಿದೆ.

ಹಾಲು-ತುಪ್ಪ, ಶ್ರೀಸಾಮಾನ್ಯ ಮತ್ತಿತರ ಸಿನಿಮಾಗಳಲ್ಲಿ ಸುಶ್ಮಿತಾ ಹಾಡಿದ್ದರು. ಎರಡು ವರ್ಷಗಳ ಹಿಂದಷ್ಟೇ ಶರತ್​ ಎಂಬುವರನ್ನು ಮದುವೆಯಾಗಿದ್ದರು. ಇಂದು ತಾಯಿ ಹಾಗೂ ತಮ್ಮನಿಗೆ ವಾಟ್ಸ್​ಆ್ಯಪ್​ ಸಂದೇಶ ಕಳಿಸಿ ಬಳಿಕ ನೇಣುಬಿಗಿದುಕೊಂಡಿದ್ದಾರೆ.

ಅಮ್ಮ, ನನ್ನನ್ನು ಕ್ಷಮಿಸು. ನಾನೇ ಮಾಡಿಕೊಂಡ ತಪ್ಪಿಗೆ ನಾನೇ ಶಿಕ್ಷೆ ಅನುಭವಿಸುತ್ತಿದ್ದೇನೆ. ನನ್ನ ಸಾವಿಗೆ ಶರತ್​ ಹಾಗೂ ವೈದೇಹಿ, ಗೀತಾ ನೇರವಾಗಿ ಕಾರಣ. ಶರತ್​ ಅವರ ದೊಡ್ಡಮ್ಮನ ಮಾತು ಕೇಳಿಕೊಂಡು ಹಿಂಸೆ ನೀಡುತ್ತಿದ್ದರು. ಮನೆ ಬಿಟ್ಟು ಹೋಗು ಅಂತಿದ್ದರು. ಮಾನಸಿಕವಾಗಿ ತುಂಬ ಚಿತ್ರ ಹಿಂಸೆ ಕೊಟ್ಟಿದ್ದಾರೆ. ಅವರನ್ನೆಲ್ಲ ಸುಮ್ಮನೆ ಬಿಡಬೇಡ ಎಂದು ಅಮ್ಮನಿಗೆ ಕಳಿಸಿದ ಸಂದೇಶದಲ್ಲಿ ಸುಶ್ಮಿತಾ ಹೇಳಿದ್ದಾರೆ.

ಮದುವೆ ಆದಾಗಿನಿಂದಲೂ ಇದೇ ತರಹ ನಡೆಯುತ್ತಿದೆ. ಯಾರ ಬಳಿಯೂ ನಾನು ಹೇಳಿಕೊಂಡಿರಲಿಲ್ಲ. ನನ್ನ ಕಾರ್ಯವನ್ನು ನನ್ನ ತಮ್ಮನೇ ಮಾಡಲಿ. ಅಮ್ಮಾ ನಿನಗೋಸ್ಕರ ತಮ್ಮ ಸಚಿನ್​ ಇದಾನೆ. ಅವನ್ನ ಚೆನ್ನಾಗಿ ನೋಡಿಕೋ, ಕ್ಷಮಿಸು ಎಂದು ವಾಟ್ಸ್​ಆ್ಯಪ್​ ಮೂಲಕ ಕಳಿಸಿದ್ದಾರೆ.