ನ್ಯೂಸ್

ಗ್ರಾಮಾಯಣ- ರಂಗೇರಿದ ಕಣ; ಹೆಸರಿಗೆ ಪಕ್ಷವಿಲ್ಲ, ವೆಚ್ಚಕ್ಕಿಲ್ಲ ಕಡಿವಾಣ!

Mandara

| ವಿಲಾಸ ಮೇಲಗಿರಿ ಬೆಂಗಳೂರು

ಉಪಸಮರ, ಪರಿಷತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಳಿಕ ಗ್ರಾಮ ಪಂಚಾಯಿತಿ ಮತಯುದ್ಧಕ್ಕೆ ರಾಜ್ಯದಲ್ಲಿ ಅಖಾಡ ಸಜ್ಜಾಗುತ್ತಿದೆ. ಚುನಾವಣೆ ಸಂಬಂಧ ಮೂರು ವಾರಗಳ ಒಳಗೆ ವೇಳಾಪಟ್ಟಿ ಪ್ರಕಟಿಸುವಂತೆ ಹೈಕೋರ್ಟ್ ಸೂಚಿಸಿದ ಬೆನ್ನಲ್ಲೇ ಅಧಿಕಾರ ವಿಕೇಂದ್ರೀಕರಣದ ಮೊದಲ ಮೆಟ್ಟಿಲೆಂದೇ ಕರೆಯಲ್ಪಡುವ ಗ್ರಾಮ ಪಂಚಾಯಿತಿ ಕಣ ರಂಗೇರಿದೆ.

ಪಕ್ಷದ ಚಿಹ್ನೆ ಇಲ್ಲವಾದರೂ ಪಕ್ಷಗಳ ಮತಬ್ಯಾಂಕ್​ಗೆ ಆಧಾರ ವಾಗಿರುವ ಈ ಚುನಾವಣೆಗಾಗಿ ಹಳ್ಳಿ ಹಳ್ಳಿಗಳಲ್ಲೂ ಪಕ್ಷ ರಾಜಕಾರಣದ ಭರಾಟೆ ತಾರಕಕ್ಕೇರಿದೆ. ಪ್ರತಿಷ್ಠೆಯ ಈ ಕಣಕ್ಕಿಳಿಯಲು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಮುಖಂಡರಿಗೆ ದುಂಬಾಲು ಬೀಳುತ್ತಿದ್ದಾರೆ.

ಗ್ರಾ.ಪಂ ಅಖಾಡದಲ್ಲೂ ಆಯಾ ಪಕ್ಷಗಳ ಮುಖಂಡರು ‘ಬಣ ರಾಜಕಾರಣ’ ಮಾಡುವುದೇನೂ ಹೊಸದಲ್ಲ. ಸಣ್ಣ ಸಣ್ಣ ವಾರ್ಡ್​ಗಳು, ಸೀಮಿತ ಮತದಾರರು ಇರುವುದರಿಂದ ಈ ಚುನಾವಣೆಗೆ ಆಯೋಗ ವೆಚ್ಚ ನಿಗದಿ ಮಾಡಿಲ್ಲ. ಆದರೆ, ಈ ಚುನಾವಣೆಯಲ್ಲಿ ಕೆಲವು ಅಭ್ಯರ್ಥಿಗಳು ಮಾಡುವ ಖರ್ಚು ಕೇಳಿದರೆ ನಿಬ್ಬೆರಗಾಗುವುದಂತೂ ನಿಶ್ಚಿತ.

ಪ್ರತಿಷ್ಠೆಗೆ ವೇದಿಕೆ: ಗ್ರಾಮ ಪಂಚಾಯಿತಿ ಚುನಾವಣೆ ಸೇವೆಗಿಂತ ಪ್ರತಿಷ್ಠೆಯ ಪ್ರಶ್ನೆಯಾಗಿರುವುದೇ ಹೆಚ್ಚು. ಅನೇಕರು ಈ ಚುನಾವಣೆ ತಮ್ಮ ಪ್ರತಿಷ್ಠೆ ಹೆಚ್ಚಿಸುತ್ತದೆ. ಮುಂದೆ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ವೇದಿಕೆ ಒದಗಿಸುತ್ತದೆ ಎಂದು ಭಾವಿಸುತ್ತಾರೆ. ಅಂತಹವರು ಈ ಚುನಾವಣೆಯಲ್ಲಿ ಹಣದ ಹೊಳೆಯನ್ನೇ ಹರಿಸುತ್ತಾರೆ.

ಬಾಗಿಲಿಗೇ ಸೌಲಭ್ಯ

(ಸ್ಪರ್ಧಾಕಾಂಕ್ಷಿಗಳ ಕಸರತ್ತು) * ಪಿಂಚಣಿ, ಅಂಗವಿಕಲರ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯ ದೊರಕಿಸಿಕೊಡುವುದು * ನರೇಗಾ ಯೋಜನೆಯ ಪ್ರಯೋಜನ ಕಲ್ಪಿಸುವುದು * ತಹಸೀಲ್ದಾರ್ ಕಚೇರಿ, ಬ್ಯಾಂಕ್​ಗಳಲ್ಲಿನ ಸಣ್ಣಪುಟ್ಟ ಕೆಲಸ ಮಾಡಿಕೊಡುವುದು * ಹಣ ಇದ್ದವರು ಮತದಾರರಿಗೆ ದೇಗುಲಗಳ ಪ್ರವಾಸ ಭಾಗ್ಯ ಕರುಣಿಸುತ್ತಾರೆ

ಬೇಡಿಕೆ ಬಲು ಭಾರ!

* ಗ್ರಾಮದ ದೇವಸ್ಥಾನ ಜೀಣೋದ್ಧಾರ* ಕೊಳವೆ ಬಾವಿ ಕೊರೆಯಿಸಿ ಕೊಡಿ* ಶುದ್ಧ ನೀರಿನ ಘಟಕ ಸ್ಥಾಪಿಸಿ* ರಸ್ತೆ ರಿಪೇರಿ ಮಾಡಿಸಿಕೊಡಿಯಾವುದಕ್ಕೆ ಬೇಡಿಕೆ?: ನಗರ ಪ್ರದೇಶಗಳಿಗೆ ಹೊಂದಿಕೊಂಡಿರುವ ಮತ್ತು ಆದಾಯ ಹೆಚ್ಚಿರುವ ಗ್ರಾಮ ಪಂಚಾಯಿತಿ ಚುನಾವಣೆಗೆ ತೀವ್ರ ಪೈಪೋಟಿ ನಡೆಯುತ್ತಿದೆ. ಸಾಮಾನ್ಯ ವರ್ಗಕ್ಕೆ ಮೀಸಲಾದ ವಾರ್ಡ್​ಗಳಲ್ಲಿ ಸ್ಪರ್ಧಾಕಾಂಕ್ಷಿಗಳು ಹೆಚ್ಚುತ್ತಿದ್ದಾರೆ. ಇದು ಚುನಾವಣೆಯನ್ನು ರೋಚಕ ಘಟ್ಟಕ್ಕೆ ತಲುಪಿಸಿದೆ.

ಗೆದ್ದವರ ಸಮಾವೇಶ: ಗ್ರಾಮ ಪಂಚಾಯಿತಿ ಚುನಾವಣೆ ವಿಚಾರದಲ್ಲಿ ರಾಜಕೀಯ ಪಕ್ಷಗಳು ಹಸ್ತಕ್ಷೇಪ/ಮಧ್ಯ ಪ್ರವೇಶ ಮಾಡುವುದಕ್ಕೆ ಅವಕಾಶವಿಲ್ಲ. ಆದರೂ ಚುನಾವಣೆಗಳು ಪಕ್ಷಗಳ ಸ್ಪಷ್ಟ ನಿರ್ದೇಶನದ ಮೇಲೆಯೇ ನಡೆಯುತ್ತವೆ. ಚುನಾವಣೆ ಮುಗಿದ ಮೇಲೆ ಆಯಾ ಪಕ್ಷಗಳು ತಮ್ಮ ಬಲಾಬಲ ಪ್ರದರ್ಶನಕ್ಕೆ ಚುನಾಯಿತ ಪ್ರತಿನಿಧಿಗಳ ಸಮಾವೇಶ ನಡೆಸುತ್ತವೆ. ಮತ್ತೆ ಕೆಲವು ಪಕ್ಷಗಳು ಈ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಸಮಾವೇಶ ನಡೆಸಿ ಆತ್ಮವಿಶ್ವಾಸ ತುಂಬುವ ಹಾಗೂ ಪಕ್ಷದ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುವುದು ಗುಟ್ಟಾಗಿಲ್ಲ.

ಆಯೋಗ ಸಿದ್ಧತೆ: ರಾಜ್ಯ ಚುನಾವಣಾ ಆಯೋಗ ರಾಜ್ಯದ ಸುಮಾರು 5834 ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಬೇಕಾದ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಚುನಾವಣಾ ಸಿಬ್ಬಂದಿ, ತರಬೇತಿ, ಮತಗಟ್ಟೆ ಗುರುತಿಸುವಿಕೆ, ಮತದಾರರ ಪಟ್ಟಿ, ಸೂಕ್ಷ್ಮ ಮತಗಟ್ಟೆ, ಅತಿ ಸೂಕ್ಷ್ಮ ಮತಗಟ್ಟೆ, ಭದ್ರತಾ ವ್ಯವಸ್ಥೆ ಸೇರಿದಂತೆ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿವೆ.

ಅವಿರೋಧಕ್ಕೆ ಆದ್ಯತೆ

1. ಗ್ರಾಮ ಪಂಚಾಯತ್ ಸದಸ್ಯ ಸ್ಥಾನವನ್ನೇ ಹರಾಜಿಗಿಡುವ ಬೆಳವಣಿಗೆ ನಡೆದಿವೆ. ಯಾರು ಹೆಚ್ಚು ಬಿಡ್ ಕೂಗುತ್ತಾರೋ ಅವರ ಅವಿರೋಧ ಆಯ್ಕೆ ನಿಶ್ಚಿತ 2. ಬಿಡ್​ನಲ್ಲಿ ಬಂದ ಹಣವನ್ನು ಗ್ರಾಮದ ಕೆಲಸ, ದೇವಸ್ಥಾನ ಅಭಿವೃದ್ಧಿ ಬಳಸಲು ಗ್ರಾಮಸ್ಥರ ಆಲೋಚನೆ 3. ಕರೊನಾ ಹರಡಲು ಚುನಾವಣೆ ಕಾರಣವಾಗಬಾರದೆಂಬ ಮುಂಜಾಗ್ರತೆ ಯಿಂದಲೂ ಅವಿರೋಧ ಆಯ್ಕೆಗೆ ಒಲವು