ನವದೆಹಲಿ: ಕೋವಿಡ್ 19 ಚಿಕಿತ್ಸೆಯಲ್ಲಿ ಪ್ಲಾಸ್ಮಾ ಥೆರಪಿ ಹೆಚ್ಚು ಪರಿಣಾಮಕಾರಿಯಾಗಿದೆ ಎಂಬ ನಂಬಿಕೆ ಇತ್ತಿಚೆಗೆ ಬಲಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕರೊನಾ ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡವರಿಂದ ಪ್ಲಾಸ್ಮಾ ಸಂಗ್ರಹಿಸಲಾಗುತ್ತಿದೆ. ಆದರೆ ಈ ಥೆರಪಿ ಕೋವಿಡ್ 19 ಚಿಕಿತ್ಸೆಯಲ್ಲಿ ಸಂಪೂರ್ಣ ಪರಿಣಾಮಕಾರಿ ಎಂಬುದು ಇನ್ನೂ ದೃಢಪಟ್ಟಿಲ್ಲ. ಸದ್ಯ ಇದು ಪ್ರಾಯೋಗಿಕ ಹಂತದಲ್ಲಿ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಸ್ಪಷ್ಟಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್, ಕೋವಿಡ್ 19 ಚಿಕಿತ್ಸೆಗಾಗಿ ಯಾವುದೇ ವಿಶಿಷ್ಠ ಥೆರಪಿಗಳು ಇನ್ನೂ ಬಂದಿಲ್ಲ. ಇದರ ಚಿಕಿತ್ಸೆಯಲ್ಲಿ ಪ್ಲಾಸ್ಮಾ ಥೆರಪಿಯನ್ನು ಬಳಸಬಹುದು ಎಂಬುದಕ್ಕೆ ಹೆಚ್ಚಿನ ವೈಜ್ಞಾನಿಕ ಆಧಾರಗಳಿಲ್ಲ ಎಂದು ಹೇಳಿದರು.
ಸದ್ಯ ಕೋವಿಡ್ 19 ಚಿಕಿತ್ಸೆಯಲ್ಲಿ ಪ್ಲಾಸ್ಮಾ ಥೆರಪಿ ಎಷ್ಟು ಪರಿಣಾಮಕಾರಿ ಎಂಬ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನ ನಡೆಸುತ್ತಿದೆ ಎಂದು ತಿಳಿಸಿದರು.
ಐಸಿಎಂಆರ್ನ ಅಧ್ಯಯನ ಮುಗಿದು, ಕೋವಿಡ್ 19 ಚಿಕಿತ್ಸೆಯಲ್ಲಿ ಅದರ ಔಚಿತ್ಯ ಸಾಬೀತಾಗುವವರೆಗೆ ಪ್ಲಾಸ್ಮಾ ಥೆರಪಿಯನ್ನು ಪ್ರಾಯೋಗಿಕವಾಗಿ ಬಳಸುವುದನ್ನು ಮುಂದುವರಿಸಲಾಗುವುದು. ಸೂಕ್ತ ವೈದ್ಯಕೀಯ ಮಾರ್ಗದರ್ಶನದಲ್ಲಿ, ಸಮರ್ಪಕ ರೀತಿಯಲ್ಲಿ ಪ್ಲಾಸ್ಮಾ ಥೆರಪಿಯನ್ನು ಬಳಸದಿದ್ದರೆ ಅದು ರೋಗಿಯ ಜೀವಕ್ಕೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ ಎಂದು ವಿವರಿಸಿದರು.