ಶಿವಮೊಗ್ಗ: ಬಡಾವಣೆಯ ನಿವಾಸಿಗಳು ತಮ್ಮ ಮನೆ ಸುತ್ತಮುತ್ತ ಗಿಡ-ಮರಗಳನ್ನು ಬೆಳೆಸಬೇಕು. ಬಡಾವಣೆಗಳಲ್ಲಿ ನಿರ್ಮಿಸಿರುವ ಉದ್ಯಾನಗಳನ್ನು ಸಂರಕ್ಷಿಸಿಕೊಂಡು ಹೋಗಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಸಲಹೆ ನೀಡಿದರು. ಕುವೆಂಪುನಗರದ ಎನ್‌ಇಎಸ್ ಬಡಾವಣೆಯ ಉದ್ಯಾನ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಎನ್‌ಇಎಸ್ ಬಡಾವಣೆ ಉದ್ಯಾನಕ್ಕೆ ಯಾವೆಲ್ಲ ರೀತಿಯ ಗಿಡ-ಮರಗಳನ್ನು ಹಾಕಬೇಕು. ಎಲ್ಲಿ ಜಿಮ್ ಅಳವಡಿಸಬೇಕು. ಮಕ್ಕಳ ಆಟಿಕೆಗಳ ಅಳವಡಿಕೆ ಹೀಗೆ ಉದ್ಯಾನದ ಕುರಿತು ಸಮರ್ಪಕ ಯೋಜನೆ ತಯಾರಿಸಿ, ವ್ಯವಸ್ಥಿತವಾಗಿ ಉದ್ಯಾನ ನಿರ್ಮಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಉದ್ಯಾನಗಳನ್ನು ಉಳಿಸಿಕೊಂಡು ಹೋಗುವಲ್ಲಿ ನಿವಾಸಿಗಳ ಸಹಕಾರ ಅತ್ಯಗತ್ಯವಾಗಿದೆ. ಎಲ್ಲ ನಿವಾಸಿಗಳು ಗಿಡ ಮರಗಳನ್ನು ನೆಡಬೇಕು ಹಾಗೂ ಉದ್ಯಾನದ ಸದುಪಯೋಗ ಪಡೆಯಬೇಕೆಂದು ತಿಳಿಸಿದರು. ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ನಗರವನ್ನು ಹಸಿರೀಕರಣ ಮಾಡಲು ಸೂಡಾದಿಂದ ಕ್ರಮ ಕೈಗೊಳ್ಳಲಾಗುತ್ತಿದೆ. 5 ಕೆರೆಗಳನ್ನು ಅಭಿವೃದ್ಧಿಪಡಿಸಲು ಸಹ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ಪ್ರಸ್ತುತ ಕುವೆಂಪುನಗರದ ಹತ್ತಿರದ ಎನ್‌ಇಎಸ್ ಬಡಾವಣೆಯಲ್ಲಿ ಉದ್ಯಾನವನ ಅಭಿವೃದ್ಧಿ ಕಾಮಗಾರಿಯನ್ನು 25 ಲಕ್ಷ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು. ಫೆನ್ಸಿಂಗ್, ಹೊರಾಂಗಣ ವ್ಯಾಮಾಯ ಸಾಮಗ್ರಿ, ಪಾಥ್‌ವೇ ನಿರ್ಮಾಣ, ಕಲ್ಲಿನ ಬೆಂಚುಗಳನ್ನು ಅಳವಡಿಸಲಾಗುವುದು. ಬಡಾವಣೆ ನಿವಾಸಿಗಳು ತಮ್ಮ ಮನೆ ಮುಂದೆ ಗಿಡಗಳನ್ನು ಹಾಕಿ ಬೆಳೆಸಬೇಕು. ತಲಾ 20 ಲಕ್ಷ ರೂ. ವೆಚ್ಚದಲ್ಲಿ ಕೃಷಿನಗರದ ಡಾಲರ್ಸ್ ಕಾಲನಿಯ ಉದ್ಯಾನ ಹಾಗೂ ಬಸವನಗುಡಿ 100 ಅಡಿ ರಸ್ತೆಯ ರೋಟರಿ ರಕ್ತನಿಧಿ ಹತ್ತಿರದ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗುವುದು. ಸಂಪರ್ಕ ರಸ್ತೆ ಸೇರಿ ಬಡಾವಣೆಯ ಸಮಸ್ಯೆಗಳ ಕುರಿತು ಪ್ರಾಧಿಕಾರದ ಗಮನಕ್ಕೆ ತಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಎನ್‌ಇಎಸ್ ಬಡಾವಣೆ ನಿವಾಸಿಗಳ ಸಂಘದ ಅಧ್ಯಕ್ಷ ಕೆ.ಎನ್.ಪ್ರಸನ್ನ ಮಾತನಾಡಿ, ಬಡಾವಣೆ ಅಭಿವೃದ್ಧಿ ಹೊಂದುತ್ತಿದೆ. ಆದರೆ ಇಲ್ಲಿ ಸಂಪರ್ಕ ರಸ್ತೆಗೆ ಸ್ವಲ್ಪ ತೊಂದರೆ ಇದ್ದು, ಸಂಪರ್ಕ ರಸ್ತೆ ನಿರ್ಮಿಸಿಕೊಡಬೇಕು ಹಾಗೂ ಸಿಟಿ ಬಸ್ ವ್ಯವಸ್ಥೆ ಮಾಡಿಕೊಡಬೇಕು ಎಂದರು. ಸೂಡಾ ಮಾಜಿ ಅಧ್ಯಕ್ಷ ಎಸ್.ಜ್ಞಾನೇಶ್ವರ್, ಎನ್.ಜೆ.ನಾಗರಾಜ್, ಆಯುಕ್ತ ವಿಶ್ವನಾಥ ಮುದಜ್ಜಿ, ಅಭಿಯಂತರರಾದ ಬಸವರಾಜಪ್ಪ, ಗಂಗಾಧರ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಎನ್‌ಇಎಸ್ ಬಡಾವಣೆಯ ಭಾಗದಲ್ಲಿ ಕಂದಾಯ ನಿವೇಶನಗಳು ಮಧ್ಯೆ ಇದ್ದು ಇದರಿಂದ ಮುಖ್ಯ ರಸ್ತೆಗೆ ಸಂಪರ್ಕ ರಸ್ತೆ ಸಾಧ್ಯವಾಗುತ್ತಿಲ್ಲ. ಕನ್ವರ್ಷನ್‌ಗೆ ಬಂದ ವೇಳೆ ಸಂಪರ್ಕ ರಸ್ತೆಗೆ ಅನುವು ಮಾಡಿಕೊಡಬೇಕು. ಈ ಭಾಗದಲ್ಲಿರುವ 6 ಕೆರಗಳನ್ನು ಅಭಿವೃದ್ಧಿ ಮಾಡಿಕೊಡಬೇಕು. - ಧೀರರಾಜ್ ಹೊನ್ನವಿಲೆ, ಪಾಲಿಕೆ ಮಾಜಿ ಸದಸ್ಯ