ನ್ಯೂಸ್

ಜಲಮೂಲಗಳ ಸದ್ಬಳಕೆಗೆ ಯೋಜನೆ; ಸಚಿವ ಬೋಸರಾಜು ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಜಲಮೂಲಗಳ ಕೊರತೆ ಇಲ್ಲ. ಆದರೆ ನೀರಿನ ಸದ್ಬಳಕೆಯಾಗದೆ ಬೇಸಿಗೆಯಲ್ಲಿ ಬರದ ಪರಿಸ್ಥಿತಿ ಎದುರಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಜಲಮೂಲಗಳಲ್ಲಿನ ನೀರಿನ ಸದ್ಬಳಕೆಗೆ ಅಗತ್ಯ ಯೋಜನೆಗಳನ್ನ ರೂಪಿಸಲು ಒತ್ತು ನೀಡಬೇಕು ಎಂದು ಅಧಿಕಾರಿಗಳಿಗೆ ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಸೂಚಿಸಿದರು.

ವಿಕಾಸಸೌಧದಲ್ಲಿ ಸಣ್ಣ ನೀರಾವರಿ ಇಲಾಖೆಯ ಯೋಜನೆ ಮತ್ತು ಕಾಮಗಾರಿಗಳ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಮಂಗಳವಾರ ಮಾತನಾಡಿ ನಡೆಸಲಾಯಿತು. ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಭೆಯಲ್ಲಿ ಪಾಲ್ಗೊಂಡು ಮಾಹಿತಿ ಪಡೆದುಕೊಂಡರು.

ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಜಲಮೂಲಗಳಿಗೆ ಕೊರತೆಯಿಲ್ಲ. ಉತ್ತಮ ಮಳೆಯೂ ಆಗುತ್ತದೆ. ಆದರೆ ನೀರನ್ನು ಸಮರ್ಪಕವಾಗಿ ಬಳಸಲು ಅಗತ್ಯ ಯೋಜನೆಗಳು ಇಲ್ಲದ ಕಾರಣ ನೀರು ಹರಿದು ಹೋಗುತ್ತಿದೆ. ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ದಿ ಮತ್ತು ನೀರಿನ ಸಮರ್ಪಕ ಬಳಕೆಗೆ ಯೋಜನೆಗಳ ಅಗತ್ಯವಿದೆ ಎಂದರು.

ಈ ಅಭಿಪ್ರಾಯಕ್ಕೆ ಎನ್.ಎಸ್.ಬೋಸರಾಜು ಸಹಮತ ವ್ಯಕ್ತಪಡಿಸಿ, ಜಲಮೂಲಗಳಲ್ಲಿನ ನೀರಿನ ಉಳಿತಾಯ, ಸಮರ್ಪಕ ಬಳಕೆಯಿಂದ ಅಂತರ್ಜಲ ಹೆಚ್ಚಳ ಸಾಧ್ಯ. ಅಲ್ಲದೆ, ಬರದಂತಹ ಪರಿಸ್ಥಿತಿಯಲ್ಲಿ ಈ ಯೋಜನೆಗಳು ನಮ್ಮ ಕೈ ಹಿಡಿಯುತ್ತವೆ ಎಂದರು.

ಕಾಮಗಾರಿ ವೇಗ ಹೆಚ್ಚಿಸಲು ತಾಕೀತು

ಶಿವಮೊಗ್ಗ ಜಿಲ್ಲೆಯಲ್ಲಿ 27 ಕೆರೆಗಳ ಅಭಿವೃದ್ಧಿ ಸೇರಿ 57 ಕಾಮಗಾರಿಗಳು ಪ್ರಗತಿಯಲ್ಲಿವೆ. ನೀರಿನ ಅಭಾವವನ್ನು ನೀಗಿಸುವ ನಿಟ್ಟಿನಲ್ಲಿ ಕೆರೆಗೆ ನೀರು ತುಂಬಿಸುವ ಏತ ನೀರಾವರಿ ಕಾಮಗಾರಿಗಳನ್ನು ಕೈಗೊಳ್ಳುವ ಅವಶ್ಯಕತೆಯಿದೆ ಎಂದು ತಾಕೀತು ಮಾಡಿದರು.

ಹೊಳೆ ಹಸನವಾಡಿ ಏತ ನೀರಾವರಿ ಯೋಜನೆಯಡಿ 29 ಕೆರೆಗಳ ಭರ್ತಿ ಉದ್ದೇಶವಿದ್ದು, ಈ ಪೈಕಿ ಮೊದಲ ಮೊದಲ ಹಂತದಲ್ಲಿ 12 ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಡಿಸೆಂಬರ್ ತಿಂಗಳೊಳಗಾಗಿ ಮುಗಿಸಬೇಕು. ಮಂಡಗದ್ದೆ ಏತ ನೀರಾವರಿ ಯೋಜನೆಯನ್ನೂ ಶೀಘ್ರ ಪೂರ್ಣಗೊಳಿಸಿ ಉದ್ಘಾಟನೆಗೆ ಸಿದ್ದಗೊಳಿಸಲು ಸೂಚಿಸಿದರು.

ಅಕ್ಟೋಬರ್‌ನಲ್ಲಿ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸುವೆ. ಇದಕ್ಕೂ ಮುನ್ನ ಶಿವಮೊಗ್ಗ ಜಿಲ್ಲೆಯ ಕಾಮಗಾರಿಗಳ ವಸ್ತುಸ್ಥಿತಿಯ ಬಗ್ಗೆ ವರದಿ ನೀಡಬೇಕು. ಪೂರ್ಣಗೊಂಡ ಯೋಜನೆಯು ಲಾನುಭವಿಗಳಿಗೆ ತಲುಪಿದರೆ ಉದ್ದೇಶ ಸಾರ್ಥಕವಾಗಲಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕು ಎಂದು ಎನ್.ಎಸ್.ಬೋಸರಾಜು ಸಲಹೆ ನೀಡಿದರು.

ಹಿರಿಯ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸಚಿವರು ಸೂಚನೆ ನೀಡಿದರು.