ನ್ಯೂಸ್

ಲಕ್ಕಿ ಭಾಸ್ಕರ್ ಚಿತ್ರದಂತೆ ಬ್ಯಾಂಕಿನಿಂದ 4.58 ಕೋಟಿ ರೂ. ಕದ್ದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ! ಮುಂದೇನಾಯ್ತು? Lucky Bhaskar

Lucky Bhaskar : ಸಿನಿಮಾಗಳಲ್ಲಿ ನಡೆಯುವಂತೆ ನಿಜ ಜೀವನದಲ್ಲೂ ಪವಾಡಗಳು ಸಂಭವಿಸುತ್ತವೆ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಸಿನಿಮಾಗಳು ಕೇವಲ ಕಾಲ್ಪನಿಕವಷ್ಟೇ ಆದರೆ, ವಾಸ್ತವ ಬೇರೆಯಾಗಿರುತ್ತದೆ. ಸಿನಿಮಾದಲ್ಲಿ ಏನು ಬೇಕಾದರೂ ಮಾಡಬಹುದು. ಆದರೆ, ನಿಜ ಜೀವನದಲ್ಲಿ ಆ ರೀತಿ ಆಗಲ್ಲ. ಸಿನಿಮಾದ ದೃಶ್ಯಗಳಿಂದ ಪ್ರಭಾವಿತರಾಗಿ ಅದನ್ನು ಅನುಸರಿಸಿದ ಅನೇಕರು ಅಪಾಯಕ್ಕೆ ಸಿಲುಕಿರುವ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣು ಮುಂದಿವೆ. ಆ ಸಾಲಿಗೆ ಮತ್ತೊಂದು ಘಟನೆ ಸೇರಿಕೊಂಡಿದೆ.

ಇತ್ತೀಚೆಗೆ ಬಿಡುಗಡೆಯಾದ ದುಲ್ಕರ್​ ಸಲ್ಮಾನ್​​ ಅಭಿನಯದ ಲಕ್ಕಿ ಭಾಸ್ಕರ್ ಸಿನಿಮಾ ಸಿಕ್ಕಾಪಟ್ಟೆ ಹಿಟ್​ ಆಯಿತು. ಬ್ಯಾಂಕ್​ ಉದ್ಯೋಗಿಯೊಬ್ಬ ಅಲ್ಲಿನ ಹಣವನ್ನು ಕದ್ದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುವುದು ಸಿನಿಮಾ ಕತೆ. ಇದರಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುವ ನಾಯಕ, ತನ್ನ ಬುದ್ಧಿವಂತಿಕೆಯಿಂದ ಎಲ್ಲರಿಗೂ ಚಳ್ಳೇಹಣ್ಣು ತಿನ್ನಿಸಿ, ಶ್ರೀಮಂತನಾಗಿ, ವಿದೇಶಕ್ಕೆ ಹೋಗಿ ನೆಲೆಸುತ್ತಾನೆ.

ಈ ಸಿನಿಮಾವನ್ನೇ ಅನುಸರಿಸಿ ಅನೇಕರು ಜೈಲುಪಾಲಾದ ಘಟನೆಗಳು ಇತ್ತೀಚೆಗೆ ನಡೆದಿವೆ. ಇದೀಗ ಅದೇ ರೀತಿಯ ಮತ್ತೊಂದು ಘಟನೆ ನಡೆದಿದ್ದು, ರಾಜಸ್ಥಾನದ ಬ್ಯಾಂಕ್​ ಉದ್ಯೋಗಿಯೊಬ್ಬರು ಅರೆಸ್ಟ್​ ಆಗಿದ್ದಾರೆ. ಅಷ್ಟಕ್ಕೂ ಏನಿದು ಘಟನೆ? ವಿವರವಾಗಿ ತಿಳಿದುಕೊಳ್ಳೋಣ.

ಈ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಇಲ್ಲಿನ ಐಸಿಐಸಿಐ ಬ್ಯಾಂಕಿನ ರಿಲೇಶನ್‌ಶಿಪ್ ಮ್ಯಾನೇಜರ್ ಸಾಕ್ಷಿ ಗುಪ್ತಾ, 41 ಗ್ರಾಹಕರ ಸ್ಥಿರ ಠೇವಣಿ ಖಾತೆಗಳಿಂದ 4.58 ಕೋಟಿ ರೂ.ಗಳನ್ನು ವಂಚಿಸಿದ್ದಾರೆ. 2020 ರಿಂದ 2023 ರ ನಡುವೆ 110 ಖಾತೆಗಳಿಂದ 4.58 ಕೋಟಿ ರೂ.ಗಳನ್ನು ವಿತ್​ಡ್ರಾ ಮಾಡಿ ವಂಚಿಸಿದ್ದಾರೆ.

ಗ್ರಾಹಕರು ನೀಡಿದ ಫೋನ್ ಸಂಖ್ಯೆಗಳನ್ನು ಬದಲಾಯಿಸಿ, ತಮ್ಮ ಕುಟುಂಬ ಸದಸ್ಯರ ಸಂಖ್ಯೆಗಳನ್ನು ಅಪಡೇಟ್​ ಮಾಡಿದ್ದರು. ಇದರಿಂದ ಒಟಿಪಿಗಳು ಮತ್ತು ಯಾವುದೇ ಸಂದೇಶಗಳು ಗ್ರಾಹಕರಿಗೆ ತಲುಪುತ್ತಿರಲಿಲ್ಲ. ಇದರಿಂದ ಗ್ರಾಹಕರಿಗೂ ಅನುಮಾನ ಬರುತ್ತಿರಲಿಲ್ಲ. ಇತ್ತ ಗ್ರಾಹಕರಿಂದ ಕದ್ದ ಎಲ್ಲ ಹಣವನ್ನು ಸಾಕ್ಷಿ ಗುಪ್ತಾ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರು.

ಆದರೆ, ದೇವರ ಆಟವೇ ಬೇರೆ ಇತ್ತು. ಹೂಡಿಕೆ ಮಾಡಿದ ಹಣವನ್ನೆಲ್ಲ ಸಾಕ್ಷಿ ಗುಪ್ತಾ ಕಳೆದುಕೊಂಡರು. ಅಲ್ಲದೆ, ಹಣವನ್ನು ಮರಳಿ ಠೇವಣಿ ಮಾಡಲು ಸಹ ಆಕೆಗೆ ಸಾಧ್ಯವಾಗಲಿಲ್ಲ. ಗ್ರಾಹಕರು ತಮ್ಮ ಠೇವಣಿಗಳನ್ನು ಪರಿಶೀಲಿಸಿದಾಗ, ಹಣ ಇಲ್ಲದಿರುವ ಸಂಗತಿ ತಿಳಿದುಬಂದಿದೆ. ತಕ್ಷಣ ಪೊಲೀಸರನ್ನು ಸಂಪರ್ಕಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಲಕ್ಕಿ ಭಾಸ್ಕರ್​ ಸಿನಿಮಾದಲ್ಲಿ ನಾಯಕ ತಪ್ಪಿಸಿಕೊಳ್ಳವಂತೆ ತಪ್ಪಿಸಿಕೊಳ್ಳಲು ಸಾಧ್ಯವಾಗದ ಕಾರಣ, ಸಾಕ್ಷಿ ಗುಪ್ತಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಗ್ರಾಹಕರೊಬ್ಬರು ಫೆಬ್ರವರಿ 18 ರಂದು ಪೊಲೀಸರಿಗೆ ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂತು. ಅಂದಿನಿಂದ ಸಾಕ್ಷಿ ತಲೆಮರೆಸಿಕೊಂಡಿದ್ದರು. ಇದೇ ಗುರುವಾರ ತನ್ನ ಸಹೋದರಿಯ ಮದುವೆಗೆ ಬಂದಿದ್ದ ಸಾಕ್ಷಿ ಗುಪ್ತಾಳನ್ನು ಬಂಧಿಸಲಾಯಿತು. ಐಸಿಐಸಿಐ ಬ್ಯಾಂಕ್, ಗ್ರಾಹಕರಿಗೆ ಆಗಿರುವ ನಷ್ಟವನ್ನು ಸರಿದೂಗಿಸುವುದಾಗಿ ಘೋಷಿಸಿದೆ. (ಏಜೆನ್ಸೀಸ್​)