- ಮದ್ಯವ್ಯಸನಿಯ ಕಥೆಯಲ್ಲ ಜೀವನ!
- ಕುಡಿತದಿಂದ ಜೀವನ ಹಾಳುಮಾಡಿಕೊಳ್ಳುವವರಿಗೆ ತಿಳಿ ಹೇಳುವ ಪ್ರಯತ್ನ
- ದೀರ್ಘ ಕಥೆಯಲ್ಲಿ ಟ್ವಿಸ್ಟ್-ಟರ್ನ್ ಕಡಿಮೆ
ಬೆಂಗಳೂರು: ಚಿಕ್ಕಂದಿನಲ್ಲಿ ಬಿಟ್ಟು ಹೋದ ಅಮ್ಮ, ದೊಡ್ಡವನಾದ ಮೇಲೆ ಓಡಿಹೋದ ಹೆಂಡತಿ. ಈ ಇಬ್ಬರ ನಂಬಿಕೆ ದ್ರೋಹದಿಂದ ಪೀಟರ್ (ಲಿಖಿತ್) ಮದ್ಯವ್ಯಸನಿಯಾಗುತ್ತಾನೆ. ಮೊದ ಮೊದಲು ಒಂದು ಪೆಗ್‌ಗೆ ಸೀಮಿತನಾಗಿದ್ದವನು, ದಿನ ಕಳೆದಂತೆ ಮೂರು ಹೊತ್ತು ಕುಡಿತವೇ ಜೀವನ ಎಂಬಂತಾಗುತ್ತದೆ. ಈ ಹಾಳು ಮದ್ಯವ್ಯಸನದಿಂದಾಗಿ ಕೈಯಲ್ಲಿದ್ದ ಒಳ್ಳೆಯ ಕೆಲಸ, ಕಟ್ಟಿಕೊಂಡ ಚಹಾ ಉದ್ಯಮವು ಆತನನ್ನು ಕೈಬಿಟ್ಟುಹೋಗುತ್ತವೆ. ಈ ಎಲ್ಲ ನೋವು, ಸಂಕಟ ಹಾಗೂ ತೀವ್ರ ಯಾತನೆಯಿಂದಾಗಿ ಆತ ಹೇಗೆ ಹೊರಬರುತ್ತಾನೆ? ಎಂಬುದೇ ‘ಪಿಯೊಟು’ ಚಿತ್ರದ ಕಥೆ. ನಿರ್ದೇಶಕ ಕಾರ್ತಿಕ್ ರಾಜನ್ ಮದ್ಯವ್ಯಸನದಿಂದಾಗಿ ಬದುಕನ್ನೇ ಹಾಳು ಮಾಡಿಕೊಳ್ಳುವ ಯುವಕರಿಗೆ ಈ ಸಿನಿಮಾ ಮೂಲಕ ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ. ದೀರ್ಘ ಕಥೆಯಲ್ಲಿ ಟ್ವಿಸ್ಟ್-ಟರ್ನ್ ಕಡಿಮೆ. ಪೀಟರ್ ಬದುಕಿನಲ್ಲಿ ಮಂದಹಾಸ ಮೂಡಿಸುವ ಕೆಲ ಘಟನೆಗಳನ್ನು ತೋರಿಸುವ ಅವಕಾಶವಿತ್ತು. ಮೊದಲಿನಿಂದ ಕ್ಲೈಮ್ಯಾಕ್ಸ್‌ವರೆಗೆ ಇಡೀ ಕಥೆಯನ್ನು ‘ಎಣ್ಣೆ’ಯಲ್ಲಿ ಮುಳುಗಿಸಿದ್ದಾರೆ. ಬದುಕು ಕಟ್ಟಿಕೊಳ್ಳುವ ಮಾದರಿಯನ್ನು ಕೊನೆಗೆ ಹೇಳಿದ್ದಾರೆ. ಇನ್ನು ನಾಯಕ ನಟ ಲಿಖಿತ್ ಇಡೀ ಕಥೆಯನ್ನು ಆವರಿಸಿದ್ದಾರೆ. ಪ್ರತಿ ಫ್ರೇಮ್ನಲ್ಲಿ ಅವರೇ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕೆ ಇನ್ನೊಂದಿಷ್ಟು ತಯಾರಿ ಬೇಕಿತ್ತು ಅನಿಸುತ್ತದೆ. ಅಶ್ವಿನಿ ಛಾವರೆ ಪಾತ್ರ ಎರಡು-ಮೂರು ದೃಶ್ಯಗಳಿಗೆ ಮಾತ್ರ ಸೀಮಿತವಾಗಿದೆ. ಹೇಮಂತ್ ಕುಮಾರ್ ಸಂಗೀತ ಕುಣಿಸುತ್ತದೆ. ನೋವು ಮರೆಯಲು ಮದ್ಯವ್ಯಸನಿಯಾಗುವುದಕ್ಕಿಂತ, ಅವುಗಳನ್ನು ಧೈರ್ಯದಿಂದ ಮೆಟ್ಟಿನಿಂತು, ಬದುಕು ಕಟ್ಟಿಕೊಳ್ಳಬಹುದು ಎಂದು ‘ಪಿಯೊಟು’ ಸಾರುತ್ತಾನೆ.