* ಭೇಟಿ ವೇಳೆ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ
* ಕೈಗಾರಿಕೆ, ಸ್ಥಳಿಯ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ತಾಕೀತು
ಬೆಂಗಳೂರು: ಕೆರೆ, ಕಾಲುವೆಗಳಿಗೆ ತ್ಯಾಜ್ಯ ನೀರು ಬಿಡುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಿವಣ್ಣ ಬುಧವಾರ ಆ ಸ್ಥಳಗಳಿಗೆ ಭೇಟಿ ಪರಿಶೀಲಿಸಿದರು.
ಚಂದಾಪುರ, ರಾಮಕೃಷ್ಣಾಪುರ, ಹೆನ್ನಾಗರ, ಹೀಲಲಿಗೆ ಮತ್ತು ಮುತ್ತಾನಲ್ಲೂರು ಕೆರೆಗಳಿಗೆ ಭೇಟಿ ನೀಡಿದಾಗ ಕೈಗಾರಿಕೆಗಳಿಂದ ಹಾಗೂ ವಸತಿ ಪ್ರದೇಶದಿಂದ ಒಳಚರಂಡಿ ನೀರು ಹಾಗೂ ಕಸ ಹಾಕಿರುವುದನ್ನು ಕಂಡು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಎಲೆಕ್ಟ್ರಾನಿಕ್ಸ್ ಸಿಟಿ, ಜಿಗಣಿ ಹಾಗೂ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಿಂದ ಸಂಸ್ಕರಿಸದ ತ್ಯಾಜ್ಯ ನೀರು, ಸ್ಥಳಿಯ ಸಂಸ್ಥೆಗಳಿಂದ ಹಾಗೂ ಸಾರ್ವಜನಿಕರು ತ್ಯಾಜ್ಯ ತಂದು ಹಾಕುತ್ತಾರೆ ಎಂದು ಸಾರ್ವಜನಿಕರು ಸಚಿವರ ಗಮನಕ್ಕೆ ತಂದರು. ಕೈಗಾರಿಕೆಗಳಿಂದ ಹೊರ ಬರುವ ನೀರನ್ನು ಸಂಸ್ಕರಿಸದೆ, ಒಳಚರಂಡಿ ನೀರು ಯಾವುದೇ ಕೆರೆ, ಕಾಲುವೆಗೆ ಸೇರಲು ಅವಕಾಶ ನೀಡಬಾರದು. ಮುಂದಿನ ಭೇಟಿ ವೇಳೆ ಇದೇ ಅವ್ಯವಸ್ಥೆ ಕಂಡುಬಂದರೆ ಅಧಿಕಾರಿಗಳನ್ನು ಹೊಣೆ ಮಾಡಬೇಕಾಗುತ್ತದೆ ಎಂದು ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದರು.
ಭೇಟಿ ನಂತರ ಸ್ಥಳಿಯರೊಂದಿಗೆ ಸಂವಾದ ನಡೆಸಿ, ಅವರ ಅಹವಾಲುಗಳನ್ನು ಸ್ವೀಕರಿಸಿದರು. ಅಧಿಕಾರಿಗಳಾದ ಆರ್.ಕೆ.ರಮೇಶ್, ಆರ್.ಗೋಕುಲ್, ಶ್ರೀನಿವಾಸುಲು, ಕ್ಯಾಪ್ಟನ್ ಸಂತೋಷ್ ಇತರರಿದ್ದರು.
ಮೇಲ್ವಿಚಾರಣ ಸಮಿತಿ ರಚಿಸಿ
ಎಲೆಕ್ಟ್ರಾನಿಕ್ಸ್ ಸಿಟಿ, ಬೊಮ್ಮಸಂದ್ರ, ಜಿಗಣಿ ಹಾಗೂ ಅತ್ತಿಬೆಲೆ ಪ್ರದೇಶಗಳಲ್ಲಿ ಕೈಗಾರಿಕಾ ತ್ಯಾಜ್ಯ ನೀರು ಹೊರಹಾಕುವ ಸ್ಥಳಗಳನ್ನು ನಿಯಮಿತವಾಗಿ ಪರಿಶೀಲಿಸಲು ಹಾಗೂ ಪರಿಸರ ನಿಯಮಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳಲು ಪರಿಸರ ನಿಯಂತ್ರಣ ಮಂಡಳಿಯಿಂದ ಮೇಲ್ವಿಚಾರಣಾ ಸಮಿತಿಗಳನ್ನು ರಚಿಸಿ ನಿಗಾ ವಹಿಸಬೇಕು ಎಂದು ರಾಮಲಿಂಗಾರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು. ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಹಾಗೂ ಪರಿಸರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅಧಿಕಾರಿಗಳು ಮುಂದಾಗಬೇಕು. ಸಂಸ್ಕರಿಸದ ತ್ಯಾಜ್ಯ ನೀರನ್ನು ಹೊರಬಿಡುವ ಕೈಗಾರಿಕೆಗಳು ಹಾಗೂ ಸ್ಥಳಿಯ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.